Tuesday, 15th October 2024

Haryana Polls: ಮಹಿಳೆಯರಿಗೆ ಮಾಸಿಕ 2,100 ರೂ., ಅಗ್ನಿವೀರರಿಗೆ ಸರ್ಕಾರಿ ಉದ್ಯೋಗ; ಬಿಜೆಪಿ ಪ್ರಣಾಳಿಕೆಯಲ್ಲಿ ಏನೇನಿದೆ?

Haryana Polls

ಚಂಡಿಗಢ: ರಾಜ್ಯದಲ್ಲಿ ಸುಮಾರು 2 ಲಕ್ಷ ಉದ್ಯೋಗ ಸೃಷ್ಟಿ, ಲಾಡೋ ಲಕ್ಷ್ಮೀ ಯೋಜನೆ ಮೂಲಕ ಮಹಿಳೆಯರಿಗೆ ಮಾಸಿಕ 2,100 ರೂ. ವಿತರಣೆ, ಹರ್‌ ಘರ್‌ ಗೃಹಿಣಿ ಯೋಜನೆ ಮೂಲಕ 500 ರೂ.ಗೆ ಅಡುಗೆ ಗ್ಯಾಸ್‌ ಸಿಲಿಂಡರ್‌-ಇದು ಹರಿಯಾಣ ವಿಧಾನಸಭಾ ಚುನಾವಣೆ (Haryana Polls)ಯ ಹಿನ್ನೆಲೆಯಲ್ಲಿ ಬಿಜೆಪಿ ಬಿಡುಗಡೆಗೊಳಿಸಿದ ಪ್ರಣಾಳಿಕೆ (Manifesto)ಯಲ್ಲಿ ಮತದಾರರಿಗೆ ಘೋಷಿಸಿದ ಪ್ರಮುಖ ಕೊಡುಗೆಗಳು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇಂದು (ಸೆಪ್ಟೆಂಬರ್‌ 19) ಹರಿತಯಾಣದ ರೋಹ್ಟಕ್‌ನಲ್ಲಿ ಪ್ರಣಾಳಿಕೆ (ಸಂಕಲ್ಪ ಪತ್ರ)ಯನ್ನು ಬಿಡುಗಡೆಗೊಳಿಸಿದರು. ʼʼಬಿಜೆಪಿಯ ಪ್ರಣಾಳಿಕೆ ಎನ್ನುವುದು ದಾಖಲೆಯಾಗಿದ್ದು, ಪಕ್ಷ ನೀಡುವ ಭರವಸೆಗಳನ್ನೆಲ್ಲ ಈಡೇರಿಸುತ್ತದೆ. ಪ್ರಣಾಳಿಕೆಯನ್ನು ಘೋಷಿಸದ ಕೊಡುಗೆಯನ್ನೂ ಜನರಿಗಾಗಿ ಜಾರಿಗೊಳಿಸುವುದು ಪಕ್ಷದ ಇನ್ನೊಂದು ಹೆಗ್ಗಳಿಕೆʼʼ ಎಂದು ಜೆ.ಪಿ.ನಡ್ಡಾ ಹೇಳಿದರು.

ಪ್ರಣಾಳಿಕೆಯಲ್ಲಿ ಏನಿದೆ?

ʼʼಬಿಜೆಪಿ ಆಡಳಿತದ ಬಳಿಕ ಹರಿಯಾಣದಲ್ಲಿ ಆಮೂಲಾಗ್ರ ಬದಲಾವಣೆ ಕಂಡುಬಂದಿದೆ. 2014ರಲ್ಲಿ 1.37 ಲಕ್ಷ ರೂ. ಆಗಿದ್ದ ರಾಜ್ಯದ ತಲಾ ಆದಾಯ ಈಗ 3 ಲಕ್ಷ ರೂ.ಗೆ ಏರಿಕೆಯಾಗಿದೆ. 10 ವರ್ಷದ ಹಿಂದೆ ರಾಜ್ಯದ ರಫ್ತು ಮೌಲ್ಯ ಕೇವಲ 68,000 ಕೋಟಿ ರೂ. ಆಗಿತ್ತು. ಅದು ಈಗ 2.5 ಲಕ್ಷ ಕೋಟಿ ರೂ.ಗೆ ವೃದ್ಧಿಸಿದೆʼʼ ಎಂದು ಅವರು ತಿಳಿಸಿದರು.

ʼʼ10 ವರ್ಷದ ಹಿಂದೆ ಇದ್ದ ಹರಿಯಾಣದ ಚಿತ್ರಣ ಈಗ ಬದಲಾಗಿದೆ. ಆಗೆಲ್ಲ ಉದ್ಯೋಗ ಒದಗಿಸುತ್ತೇವೆ ಎನ್ನುವುದು ಕಾಗದಕ್ಕೆ ಸೀಮಿತವಾಗಿತ್ತು. ಜನರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿತ್ತು. ಹರಿಯಾಣವು ಭೂ ಹಗರಣಗಳಿಗೆ ಹೆಸರುವಾಸಿಯಾಗಿತ್ತು. ಈಗ ಚಿತ್ರಣ ಬದಲಾಗಿದೆ. ಭರವಸೆಯನ್ನು ಈಡೇರಿಸಲು ನಾವು ನಿರಂತರವಾಗಿ ಕೆಲಸ ಮಾಡುತ್ತೇವೆʼʼ ಎಂದು ನಡ್ಡಾ ಭರವಸೆ ನೀಡಿದರು.

ಒಬಿಸಿ ಮತ್ತು ಎಸ್‌ಸಿ ಸಮುದಾಯಗಳ ಹರಿಯಾಣದ ವಿದ್ಯಾರ್ಥಿಗಳಿಗೆ ದೇಶಾದ್ಯಂತ ಯಾವುದೇ ಸರ್ಕಾರಿ ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿವೇತನ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ. ಖಾರ್ಖೋಡಾದಲ್ಲಿಕೈಗಾರಿಕಾ ಟೌನ್‌ಶಿಪ್‌ ಸ್ಥಾಪಿಸಿದ ಬಳಿಕ ಅದೇ ಮಾದರಿಯಲ್ಲಿ 10 ಕೈಗಾರಿಕಾ ನಗರಗಳನ್ನು ಸ್ಥಾಪಿಸಲು ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ನಡ್ಡಾ ಘೋಷಿಸಿದರು.

ಹರಿಯಾಣ ಮೂಲದ ಪ್ರತಿಯೊಬ್ಬ ಅಗ್ನಿವೀರರಿಗೆ ಸರ್ಕಾರಿ ಉದ್ಯೋಗ ವಾಗ್ದಾನವನ್ನೂ ನೀಡಲಾಗಿದೆ. ಪ್ರಣಾಳಿಕೆ ಬಿಡುಗಡೆ ವೇಳೆ ಕೇಂದ್ರ ಸಚಿವ ಎಂ.ಎಲ್. ಖಟ್ಟರ್ ಮತ್ತು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಸೇರಿದಂತೆ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಸೆಪ್ಟೆಂಬರ್‌ 18ರಂದು ಕಾಂಗ್ರೆಸ್‌ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ವಿವಿಧ ಕೊಡುಗೆಗಳನ್ನು ಪ್ರಕಟಿಸಿತ್ತು.

ಯಾವಾಗ ಚುನಾವಣೆ?

90 ಕ್ಷೇತ್ರಗಳ ಹರಿಯಾಣ ವಿಧಾನಭೆಗೆ ಅಕ್ಟೋಬರ್‌ 5ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್‌ 8ರಂದು ಫಲಿತಾಂಶ ಘೋಷಣೆಯಾಗಲಿದೆ. ಈ ಬಾರಿ ಘಟಾನುಘಟಿಗಳ ಸ್ಪರ್ಧೆಯಿಂದ ಹರಿಯಾಣ ವಿಧಾನಸಭಾ ಚುನಾವಣೆ ದೇಶದ ಗಮನ ಸೆಳೆದಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಜುಲಾನಾ ಕ್ಷೇತ್ರದಿಂದ ಮಾಜಿ ಒಲಿಂಪಿಯನ್‌ ಕುಸ್ತಿಪಟು ವಿನೇಶ್‌ ಫೋಗಟ್‌ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಬಿಜೆಪಿಯಿಂದ ಬಿಜೆಪಿ ಕ್ಯಾ. ಯೋಗೇಶ್‌ ಭೈರಾಗಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಫಲಿತಾಂಶದ ಬಗ್ಗೆ ಕುತೂಹಲ ಮೂಡಿದೆ.

ಈ ಸುದ್ದಿಯನ್ನೂ ಓದಿ: Haryana Polls: ಹರಿಯಾಣ ವಿಧಾನಸಭಾ ಚುನಾವಣೆ; ಕಣಕ್ಕಿಳಿದ ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್‌: ಯಾವ ಪಕ್ಷ?