Friday, 13th December 2024

ಹರಿಯಾಣದ 14 ಗ್ರಾಮಗಳಿಂದ ಮುಸ್ಲಿಮರಿಗೆ ಬಹಿಷ್ಕಾರ

ಚಂಡೀಗಢ: ಹರಿಯಾಣದ ನುಹ್‌ ಜಿಲ್ಲೆಯಲ್ಲಿ ವಿಶ್ವ ಹಿಂದು ಪರಿಷತ್‌ ಕೈಗೊಂಡಿದ್ದ ಧಾರ್ಮಿಕ ಮೆರವಣಿಗೆ ವೇಳೆ ನಡೆದ ಹಿಂಸಾಚಾರ ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ, ಹರಿಯಾಣದ 14 ಗ್ರಾಮಗಳು ಮುಸ್ಲಿಮರನ್ನು ಬಹಿಷ್ಕರಿಸಿವೆ.

ರಾಜ್ಯದ ಮೂರು ಜಿಲ್ಲೆಗಳ 14 ಗ್ರಾಮಗಳು ಮುಸ್ಲಿಮರನ್ನು ಬಹಿಷ್ಕರಿಸಲು ತೀರ್ಮಾನಿಸಿವೆ.

ನುಹ್‌ ಜಿಲ್ಲೆಯಲ್ಲಿ ಜುಲೈ 31ರಂದು ನಡೆದ ಹಿಂಸಾಚಾರವು ಬೇರೆ ಜಿಲ್ಲೆಗಳಿಗೂ ಹರಡಿದೆ. ಹಿಂಸಾಚಾರ ದಿಂದಾಗಿ ಆರು ಜನ ಮೃತಪಟ್ಟಿದ್ದಾರೆ. ಇದರಿಂದ ಬೇಸತ್ತ ಮಹೇಂದ್ರಗಢ, ಝಜ್ಜರ್‌ ಹಾಗೂ ರೆವಾರಿ ಜಿಲ್ಲೆಯ 14 ಗ್ರಾಮಗಳ ಜನರು ಮುಸ್ಲಿಮರನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ. ಕೋಮುಗಲಭೆಗೆ ಕಾರಣ ರಾಗುವ ಇವರ ಜತೆ ವ್ಯಾಪಾರ-ವಹಿವಾಟು ಬೇಡ ಎಂಬ ನಿರ್ಧಾರಕ್ಕೆ ಗ್ರಾಮಸ್ಥರು ಬಂದಿದ್ದಾರೆ ಎಂದು ತಿಳಿದು ಬಂದಿದೆ.

“ಗ್ರಾಮಗಳಲ್ಲಿ ನಾವು ಮುಸ್ಲಿಂ ಸಮುದಾಯದವರ ಮನೆಗಳಿಗೆ ಪ್ರವೇಶಿಸುವುದಿಲ್ಲ. ಹಿಂದುಗಳು ಮುಸ್ಲಿಮರ ಅಂಗಡಿಗಳಲ್ಲಿ ಯಾವುದೇ ವಸ್ತುಗಳನ್ನು ಕೊಳ್ಳುವುದಿಲ್ಲ. ಮುಸ್ಲಿಮರ ಜತೆ ಯಾವುದೇ ವ್ಯಾಪಾರ ಇಟ್ಟುಕೊಳ್ಳು ವುದಿಲ್ಲ. ಹಾಗೆಯೇ, ಯಾರು ಇವರ ಜತೆ ಸಂಪರ್ಕ ಇಟ್ಟುಕೊಳ್ಳುತ್ತಾರೋ, ಅವರ ಮೇಲೆ ನಿಗಾ ಇಡಲಾಗು ವುದು. ಗ್ರಾಮಗಳಿಗೆ ಬರುವ ಯಾವುದೇ ವ್ಯಾಪಾರಿಗಳ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗುವುದು” ಎಂಬುದಾಗಿ ಗ್ರಾಮಸ್ಥರು ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಜುಲೈ 31ರಂದು ಹಿಂದುಗಳು ಮೆರವಣಿಗೆ ಮಾಡುವಾಗ ಕಲ್ಲು ತೂರಾಟ ನಡೆಸಲಾಗಿದೆ.