Friday, 20th September 2024

ಎಚ್‌ಡಿಎಫ್‌ಸಿ: ರಾಜೀನಾಮೆ ನೀಡಿದ ಉದ್ಯೋಗಿಗಳ ನೋಟಿಸ್ ಅವಧಿ ಕಡಿತ

ಮುಂಬೈ: ದೇಶದ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕಿಂಗ್ ಕಂಪನಿಯಾಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಹೊರಹೋಗುವ ಉದ್ಯೋಗಿಗಳ ನೋಟಿಸ್ ಅವಧಿಯನ್ನು ಕಡಿತಗೊಳಿಸಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಹೊರಹೋಗುವ ಉದ್ಯೋಗಿಗಳ ನೋಟಿಸ್ ಅವಧಿಯನ್ನು 90ದಿನಗಳಿಂದ 30 ದಿನಕ್ಕೆ ಇಳಿಸಿದೆ.

ಮೇ 6ರಂದು ಉದ್ಯೋಗಿಗಳಿಗೆ ಈ ಮೇಲ್ ಹೋಗಿದೆ ಎಂದು ಬ್ಯಾಂಕ್‌ನ ಮೂಲಗಳನ್ನು ಉಲ್ಲೇಖಿಸಿ ಫಿನಾನ್ಸಿಯಲ್ ಎಕ್ಸ್‌ಪ್ರೆಸ್ ವೆಬ್‌ಸೈಟ್ ವರದಿ ಮಾಡಿದೆ.

ಉದ್ಯೋಗಿ ಸ್ನೇಹಿ ವಾತಾವರಣ ನಿರ್ಮಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊರ ಹೋಗುವ ಉದ್ಯೋಗಿಯು 30 ದಿನಗಳೊಳಗೆ ಕಂಪನಿಯಿಂದ ಬಿಡುಗಡೆ ಮಾಡಬೇಕು ಎಂದು ಕೋರಿಕೊಂಡರೆ ಮ್ಯಾನೇಜರ್ ಮೂಲಕ ಅದನ್ನು ಅಂಗೀಕಾರ ಮಾಡಲಾಗುವುದು ಎಂದು ವಿವರಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಸಹ ನೋಟಿಸ್ ಅವಧಿ ಕಡಿತಗೊಳಿಸಿದ್ದವು.

ನೋಟಿಸ್ ಅವಧಿ ಎಂಬುದು ಒಂದು ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿ ಕೆಲಸಕ್ಕೆ ರಾಜೀನಾಮೆ ನೀಡಿದಾಗ ಕಂಪನಿಯ ಒಪ್ಪಿಗೆಯ ಮೇರೆಗೆ ನಿರ್ಗಮಿಸಬಹುದಾದ ಗರಿಷ್ಠ ಅವಧಿಯಾಗಿದೆ.