Wednesday, 11th December 2024

ಮುಂದುವರೆದ ಮಳೆ ಆರ್ಭಟ: ಸರ್ಕಾರಿ ಕಚೇರಿಗಳು ಬಂದ್, ಖಾಸಗಿ ಕಂಪೆನಿಗಳಿಗೆ ಗೊಂದಲ ?

ಚೆನ್ನೈ: ತಮಿಳುನಾಡಿನಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಅನೇಕ ಜಿಲ್ಲೆಗಳಲ್ಲಿ ಶಾಲಾ- ಕಾಲೇಜ್ ಗಳು ಬಂದ್ ಮಾಡಲಾ ಗಿದೆ. ಈವರೆಗೂ ಮಳೆ ಸಂಬಂಧಿತ ಘಟನೆಗಳಿಂದ ನಾಲ್ವರು ಮೃತಪಟ್ಟಿದ್ದು, ಓರ್ವ ಗಾಯಗೊಂಡಿದ್ದಾರೆ.

ಭಾನುವಾರ ತಡರಾತ್ರಿ ಈರೋಡ್, ತಿರವರೂರ್ ಸೇರಿದಂತೆ ತಮಿಳುನಾಡಿನ ಇತರೆ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಮುಂದುವರಿದಿರುವ ಬಗ್ಗೆ ವರದಿಗಳು ಬಂದಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿನಲ್ಲಿ ನಾಲ್ಕು ತಂಡಗಳನ್ನು ನಿಯೋಜನೆ ಮಾಡಿದೆ.

ತಿರುವಳ್ಳೂರು ಮತ್ತು ಚೆಂಗಲ್ಪಟ್ಟು ಜಿಲ್ಲೆಯಲ್ಲಿ ತಲಾ ಒಂದು ಹಾಗೂ ಮಧುರೈ ನಲ್ಲಿ 2 ತಂಡಗಳು ರಕ್ಷಣಾ ಕಾರ್ಯಾಚರಣೆ ಯಲ್ಲಿ ತೊಡಗಿಕೊಂಡಿವೆ. ರಾಜಧಾನಿ ಚೆನ್ನೈ, ಸೆಲಂ, ತಿರುಚ್ಚಿ, ಕಂಚೀಪುರಂ, ತಿರುವಳ್ಳೂರು, ಚೆಂಗಲ್ ಪೇಟ್, ಶಿವಗಂಗಾ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಶಾಲೆ ಗಳನ್ನು ಮುಚ್ಚಲಾಗಿದೆ.

ಇಂದು ಬಹುತೇಕ ಸರ್ಕಾರಿ ಕಚೇರಿಗಳು ಬಂದ್ ಆಗಿವೆ. ಖಾಸಗಿ ಸಂಸ್ಥೆಗಳು ಮನೆಯಿಂದ ಕೆಲಸ ಮಾಡಲು ಅವಕಾಶ ಕೊಡ ಬೇಕು ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಒತ್ತಾಯಿಸಿದ್ದಾರೆ.

 

ಚೆನ್ನೈನಲ್ಲಿ ಭಾರೀ ಮಳೆಯಿಂದ ಬಸ್ ಮತ್ತು ರೈಲು ಸೇವೆ ಅಸ್ತವ್ಯವಸ್ಥೆಗೊಂಡಿತ್ತು. ವಿಮಾನ ಸೇವೆಯಲ್ಲೂ ವ್ಯತ್ಯಯ ಕಂಡು ಬಂದಿತು. ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ.