Wednesday, 11th December 2024

ಗೋಡೆ ಕುಸಿತ, ವಿದ್ಯುತ್‌ ಸ್ಪರ್ಶ: ಕನಿಷ್ಠ 14 ಜನರ ಸಾವು

ಕೋಲ್ಕತ್ತ: ಪಶ್ಚಿಮ ಬಂಗಾಳದ ಆರು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಸಂಭವಿಸಿದ ಗೋಡೆ ಕುಸಿತ, ವಿದ್ಯುತ್‌ ಸ್ಪರ್ಶದಿಂದ ಕನಿಷ್ಠ 14 ಜನರು ಮೃತಪಟ್ಟಿದ್ದಾರೆ.

ದಾಮೋದರ್‌ ವ್ಯಾಲಿ ಅಣೆಕಟ್ಟೆಯಿಂದ ಹೊರ ಬಿಡಲಾದ ಹೆಚ್ಚುವರಿ ನೀರಿನಿಂದ ಹಲವು ರಸ್ತೆಗಳು, ಮನೆಗಳು ಜಲಾವೃತಗೊಂಡಿವೆ. ಹೀಗಾಗಿ ಸುಮಾರು 2.5 ಲಕ್ಷ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಳೆದ ವಾರ ಆರಂಭವಾದ ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪೂರ್ವ ವರ್ಧಮಾನ್‌, ಪಶ್ಚಿಮ ವರ್ಧಮಾನ್‌, ಪಶ್ಚಿಮ ಮೇದಿನಿಪುರ, ಹೂಗ್ಲಿ, ಹೌರಾ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳ ಹಲವಾರು ಪ್ರದೇಶಗಳಲ್ಲಿ ಸೊಂಟದ ಮಟ್ಟದವರೆಗೆ ನೀರು ಆವರಿಸಿದೆ.

‘ಪ್ರವಾಹದಿಂದ ಜೀವ ಕಳೆದುಕೊಂಡ 14 ಜನರ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ. ಈ ಕುರಿತು ಜಿಲ್ಲಾಡಳಿತಗಳಿಂದ ವರದಿಯ ನಿರೀಕ್ಷೆಯಲ್ಲಿದ್ದೇವೆ’ ಎಂದು ತಿಳಿಸಿದರು. ಹೂಗ್ಲಿ ಜಿಲ್ಲೆಯಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೋಮ ವಾರ ಸೇನೆ ಮತ್ತು ವಾಯುಪಡೆ ರಕ್ಷಣಾ ಕಾರ್ಯಾಚರಣೆ ನಡೆಸಿವೆ.