Thursday, 3rd October 2024

ಮಹಿಳೆಯರು ಹಿಜಾಬ್ ಧರಿಸಿದರೆ ಸಮಸ್ಯೆ, ಬಿಕಿನಿ ತೊಟ್ಟರೂ ಸಮಸ್ಯೆಯಾಗುತ್ತದೆ: ನುಸ್ರತ್ ಜಹಾನ್

Nusrat Jahaan
ಮುಂಬೈ: ಪಠಾಣ್ ಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಬಂಗಾಳಿ ನಟಿ ನುಸ್ರತ್ ಜಹಾನ್ ಪ್ರತಿಕ್ರಿಯಿಸಿ ದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಅವರು, “ಜನರಿಗೆ ಎಲ್ಲದರಲ್ಲೂ ಸಮಸ್ಯೆ ಇದೆ, ಮಹಿಳೆಯರು ಹಿಜಾಬ್ ಧರಿಸಿದರೆ ಅವರಿಗೆ ಸಮಸ್ಯೆ, ಮಹಿಳೆಯರು ಬಿಕಿನಿ ತೊಟ್ಟರೂ ಸಮಸ್ಯೆಯಾಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇದು ಯಾರೊಬ್ಬರ ಸಿದ್ಧಾಂತದ ವಿಚಾರವಲ್ಲ. ಬದಲಾಗಿ ಅಧಿಕಾರದಲ್ಲಿರುವ ಪಕ್ಷವೊಂದು ಜನರ ಮನಸ್ಸಿನಲ್ಲಿ ಇಂತಹ ತಪ್ಪು ವಿಚಾರ ಹಾಕಲು ಯತ್ನಿಸುತ್ತಿದೆ. ಅಂತಹ ಚಿತ್ರವನ್ನು ರಚಿಸಲು ಪ್ರಯತ್ನಿಸುತ್ತಿದೆ.

ಹೀಗಾಗಿ ಅವರು ಮಾಡುತ್ತಿರುವುದು ಆಧ್ಯಾತ್ಮಿಕ, ಧಾರ್ಮಿಕ ಕಾಳಜಿಯಿಂದಲ್ಲ. ಬದಲಾಗಿ ಇದೊಂದು ಕೇವಲ ಯೋಜಿತ ಪಿತೂರಿ. ಅದಕ್ಕಾಗಿಯೇ ಅವರು ಸಂಸ್ಕೃತಿ ಹಾಗೂ ಬಿಕಿನಿ ಧರಿಸಿದ ಮಹಿಳೆಯರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹಣಿದಿದ್ದಾರೆ.

ಇವರೆಲ್ಲರೂ ಭಾರತದ ಆಧುನಿಕ ಮಹಿಳೆಯರಿಗೆ ಏನು ಧರಿಸಬೇಕೆಂದು ಹೇಳುತ್ತಿದ್ದಾರೆ. ನಾವೇನು ಮಾಡಬೇಕೆಂದು ಹೇಳುವ ಮೂಲಕ ನಮ್ಮ ಜೀವನವನ್ನು ನಿಯಂತ್ರಿಸುತ್ತಾರೆ. ಏನು ಧರಿಸಬೇಕು, ಏನು ತಿನ್ನಬೇಕು, ಹೇಗೆ ಮಾತನಾಡಬೇಕು, ಹೇಗೆ ನಡೆಯಬೇಕು, ಶಾಲೆಯಲ್ಲಿ ಏನನ್ನು ಕಲಿಯಬೇಕು, ಟಿವಿಯಲ್ಲಿ ಏನನ್ನು ನೋಡಬೇಕು ಎಂದು ಹೇಳಿ ನಿಯಂತ್ರಿಸಲು ಯತ್ನಿಸುತ್ತಿದ್ದಾರೆ ಎಂದಿದ್ದಾರೆ.

Read E-Paper click here