Saturday, 14th December 2024

Hit and Run Case: ರಸ್ತೆ ಬದಿ ಕುಳಿತಿದ್ದ ಮೂವರು ಹುಡುಗರ ಪಾಲಿಗೆ ಯಮನಾಗಿ ಬಂದ ಕಾರು; ವಿಡಿಯೊ ನೋಡಿ

Hit and Run Case

ಫರೂಕಾಬಾದ್: ವೇಗವಾಗಿ ಬಂದ ಕಾರೊಂದು ರಸ್ತೆಯ ಬದಿಯಲ್ಲಿ ಕುಳಿತಿದ್ದ ಮೂವರು ಹುಡುಗರ ಮೇಲೆ ಹರಿದ ಪರಿಣಾಮ ಒಬ್ಬ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಈ  ಘಟನೆ ಉತ್ತರ ಪ್ರದೇಶದ ಫರೂಕಾಬಾದ್‍ನಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಾಗಾಗಿ  ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್ (Hit and Run Case) ಆಗಿದೆ.

ವೇಗವಾಗಿ ಬಂದ ಬಿಳಿ ಬಣ್ಣದ ಕಾರೊಂದು ರಸ್ತೆ ಬದಿಯಲ್ಲಿ ಕುಳಿತಿದ್ದ ಮೂವರು ಹುಡುಗರಿಗೆ ಡಿಕ್ಕಿ ಹೊಡೆದಿದೆ. ಚಾಲಕ ಕಾರು ನಿಲ್ಲಿಸದೇ ಪರಾರಿಯಾಗಿದ್ದಾನೆ. ಭೀಕರ ಅಪಘಾತದಲ್ಲಿ ಒಬ್ಬ ಸಾವನ್ನಪ್ಪಿದ್ದು, ಇತರ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಕಾನ್ಪುರ ರಸ್ತೆಯಲ್ಲಿ ಮೂವರು ಹುಡುಗರು ರಸ್ತೆ ಬದಿಯಲ್ಲಿ ಕುಳಿತಿದ್ದಾಗ ಈ ಘಟನೆ ನಡೆದಿದೆ. ಈ ವೈರಲ್ ವಿಡಿಯೊದಲ್ಲಿ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡ ಡ್ರೈವರ್ ಹೆದ್ದಾರಿಯ ಬದಿಯಲ್ಲಿ ಕುಳಿತಿದ್ದ ಮೂವರು ಹುಡುಗರಿಗೆ ಡಿಕ್ಕಿ ಹೊಡೆದಿದ್ದಾನೆ. ಆದರೆ, ಕಾರಿನ ಡ್ರೈವರ್ ಕಾರನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಮೃತನನ್ನು ಫತೇಘರ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ಪಜಾವಾ ಗ್ರಾಮದ ನಿವಾಸಿ ಹರ್ಷ (14) ಎಂದು ಗುರುತಿಸಲಾಗಿದೆ. ಹರ್ಷ್ ತನ್ನ ಸ್ನೇಹಿತರಾದ ಕೇಶವ್ ಮತ್ತು ರಜತ್ ಅವರನ್ನು ಭೇಟಿಯಾಗಿ ಮೂವರು ಕಾನ್ಪುರ ರಸ್ತೆಯ ಬಳಿ ಬೆಳಿಗ್ಗೆ ವಾಕಿಂಗ್‍ಗೆ ಹೋಗಿದ್ದರು. ಈ ಮೂವರು ತಮ್ಮ ವಾಕಿಂಗ್  ಮುಗಿಸಿ ಮೆಹ್ರುಪುರ್ ಗ್ರಾಮದ ಬಳಿ ರಸ್ತೆ ಬದಿಯಲ್ಲಿ ಕುಳಿತಿದ್ದಾಗ ವೇಗವಾಗಿ ಬಂದ ಕಾರು ಅವರನ್ನು ಡಿಕ್ಕಿ ಹೊಡೆದು ಎಳೆದೊಯ್ದಿದೆ.

ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಹರ್ಷನನ್ನು ಕಾರು ಸುಮಾರು 300 ಮೀಟರ್ ಎಳೆದೊಯ್ದಿದೆ. ಗಾಯಗೊಂಡ ಮೂವರು ಹುಡುಗರನ್ನು ಗ್ರಾಮಸ್ಥರು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯದಾಗ ಅಲ್ಲಿ ಹರ್ಷ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಕೇಶವ್ ಮತ್ತು ರಜತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು  ಈ ಘಟನೆಗೆ ಸಂಬಂಧಿಸಿದಂತೆ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ:ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಿದ ವ್ಯಕ್ತಿಗೆ ಬಿತ್ತು ಗೂಸಾ; ವಿಡಿಯೊ ವೈರಲ್

ಈ ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಟ್ವಾಲಿ ಫತೇಘರ್‌ನ ನಾಗ್ಲಾ ಪಜಾವಾ ಗ್ರಾಮದ ನಿವಾಸಿ ರಾಜ್ಕುಮಾರ್ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಅಪರಿಚಿತ ವ್ಯಾಗನ್ಆರ್ ಚಾಲಕನ ವಿರುದ್ಧ ಸೆಕ್ಷನ್ 28/25/06 ಬಿಎನ್ಎಸ್ ಅಡಿಯಲ್ಲಿ ಎಫ್ಐಆರ್ ಸಂಖ್ಯೆ 36/24 ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನ ಡ್ರೈವರ್‌ ಅನ್ನು ಪತ್ತೆಮಾಡಲು ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಕಾರಿನ ನಂಬರ್ ತಿಳಿದ ತಕ್ಷಣ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.