Friday, 4th October 2024

ರಿಶ್ರಾ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ, ಅಂತಜಾಲ ಸೇವೆ ಸ್ಥಗಿತ

ರಿಶ್ರಾ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಗಲಭೆ ಪೀಡಿತ ರಿಶ್ರಾ ಪಟ್ಟಣದಲ್ಲಿ ಇನ್ನೂ ನಿಷೇಧಾಜ್ಞೆ ಜಾರಿ ಯಲ್ಲಿದ್ದು ಇಂಟರ್‍ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪೊಲೀಸ್ ಪಡೆಗಳನ್ನು ಭಾರಿ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.

ಜಿಲ್ಲೆಯ ಯಾವುದೇ ಭಾಗದಿಂದಲೂ ಹಿಂಸಾಚಾರ ಅಥವಾ ದೊಂಬಿಯ ಘಟನೆಗಳು ವರದಿಯಾಗಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜಿಲ್ಲೆಯ ಯಾವುದೇ ಪ್ರದೇಶದಿಂದಲೂ ಅಶಾಂತಿಯ ಘಟನೆಗಳು ಸಂಭವಿಸಿಲ್ಲ.

ಮಹತ್ವದ ಜಂಕ್ಷನ್‍ಗಳಲ್ಲಿ ಮತ್ತು ಪ್ರದೇಶಗಳಲ್ಲಿ ನಾವು ಪೊಲೀಸ್ ಪಡೆಗಳನ್ನು ನಿಯೋಜಿಸಿದ್ದೇವೆ. ಉದ್ದೇಶ ವಿಲ್ಲದೆ ಯಾರೂ ಸುತ್ತ ಮುತ್ತ ಅಡ್ಡಾಡಲು ಅವಕಾಶ ಇಲ್ಲ. ಜನಜೀವನವನ್ನು ಮರಳಿ ಸಹಜ ಸ್ಥಿತಿಯತ್ತ ತರಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಚಂದಾನಾಗೋರ್ ಪೊಲೀಸ್ ಕಮೀಷನರೇಟ್‍ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಭಾನುವಾರದ ಹಿಂಸಾಚಾರದಲ್ಲಿ ಪಾತ್ರ ಇರುವ ಶಂಕೆಯ ಮೇರೆಗೆ ಕೆಲವು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಅವರು ನುಡಿದರು. ನಿಷೇಧಾಜ್ಞೆ ಮತ್ತು ಅಂತರ್ಜಾಲ ಸೇವೆಗಳ ಸ್ಥಗಿತತೆ ತೆರವುಗೊಳಿಸುವ ನಿರ್ಧಾರವನ್ನು ಪರಿಸ್ಥಿತಿ ಅಂದಾಜಿಸಿ ಕೈಗೊಳ್ಳಲಾಗುವುದು ಎಂದು ಅವರು ಪ್ರತಿಪಾದಿಸಿದರು.

ಭಾನುವಾರ ಸಂಜೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಮತ್ತು ಪಕ್ಷದ ಪುರ್‍ಸುರಾಹ್ ಶಾಸಕ ಬಿಮನ್ ಘೋಷ್ ಅವರು ಪಾಲ್ಗೊಂಡಿದ್ದ ರಾಮನವಮಿ ಮೆರವಣಿಗೆಯ ವೇಳೆ ಘರ್ಷಣೆಗಳು ನಡೆದ ಬಗ್ಗೆ ವರದಿಯಾಗಿದ್ದವು.