Friday, 13th December 2024

ಪ್ರಧಾನಿಯಿಂದ ಹರಿಯಾಣ, ಪಂಜಾಬ್‌ ’ನಲ್ಲಿ ಆಸ್ಪತ್ರೆಗಳ ಉದ್ಘಾಟನೆ ಇಂದು

ನವದೆಹಲಿ: ಹರಿಯಾಣ ಮತ್ತು ಪಂಜಾಬ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಭೇಟಿ ನೀಡಲಿದ್ದು, ಎರಡು ರಾಜ್ಯಗಳಲ್ಲಿ ಒಂದೊಂದು ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ.
ಹರಿಯಾಣದ ಫರಿದಾಬಾದ್‌ನಲ್ಲಿ ‘ಅಮೃತಾ ಆಸ್ಪತ್ರೆ’ ಮತ್ತು ಪಂಜಾಬ್‌ನ ಮೊಹಾಲಿಯ ನ್ಯೂ ಚಂಡೀಗಢದಲ್ಲಿ ‘ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ವನ್ನು ಮೋದಿ ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ. ಫರೀದಾಬಾದ್​ನ ಅಮೃತಾ ಆಸ್ಪತ್ರೆ ಒಟ್ಟು 2,600 ಬೆಡ್​ಗಳನ್ನು ಹೊಂದಿದ್ದು ಏಷ್ಯಾದ ಅತಿ ದೊಡ್ಡ ಖಾಸಗಿ ಸೂಪರ್ ಸ್ಪೆಶಾ ಲಿಟಿ ಆಸ್ಪತ್ರೆ ಎಂದೇ ಹೇಳಲಾಗಿದೆ.

ಅಮೃತಾ ಆಸ್ಪತ್ರೆಯ ಉದ್ಘಾಟನೆಯ ಮೂಲಕ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಆಧುನಿಕ ವೈದ್ಯಕೀಯ ಮೂಲಸೌಕರ್ಯಕ್ಕೆ ಉತ್ತೇಜನ ಸಿಗಲಿದೆ. 2,600 ಹಾಸಿಗೆಗಳನ್ನು ಹೊಂದಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿರುವ ಅಮೃತಾ ಆಸ್ಪತ್ರೆಯನ್ನು ಮಾತಾ ಅಮೃತಾನಂದಮಯಿ ಮಠ ನಿರ್ವಹಿಸುತ್ತದೆ ಎಂದು ಅದು ಹೇಳಿದೆ.

ಸುಮಾರು 6,000 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ ಆಸ್ಪತ್ರೆಯು ಫರಿದಾಬಾದ್ ಮತ್ತು ಇಡೀ ಎನ್‌ಸಿಆರ್ ಪ್ರದೇಶದ ಜನರಿಗೆ ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತದೆ. ಮೊಹಾಲಿ ಆಸ್ಪತ್ರೆಯು ಪಂಜಾಬ್ ಮತ್ತು ನೆರೆಯ ಪ್ರದೇಶದ ಜನರಿಗೆ ವಿಶ್ವ ದರ್ಜೆಯ ಕ್ಯಾನ್ಸರ್ ಆರೈಕೆಯನ್ನು ಒದಗಿಸುವ ಪ್ರಯತ್ನದ ಭಾಗವಾಗಿದೆ.

ಅಮೃತಾ ಆಸ್ಪತ್ರೆಯ ಕೊಚ್ಚಿ ಶಾಖೆಯು ಭಾರತದ ಮೊದಲ ಮತ್ತು ಎರಡನೇ ಯಶಸ್ವಿ ಡಬಲ್ ಹ್ಯಾಂಡ್ ಟ್ರಾನ್ಸ್‌ಪ್ಲಾಂಟ್ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ. ಮತ್ತು 19 ವರ್ಷದ ಬಾಲಕಿ ಶ್ರೇಯಾ ಸಿದ್ದನಗೌಡರ ಅವರಿಗೆ ಏಷ್ಯಾದ ಮೊದಲ ತೋಳಿನ ಡಬಲ್ ಹ್ಯಾಂಡ್ ಟ್ರಾನ್ಸ್‌ಪ್ಲಾಂಟ್ ಅನ್ನು ಅಮೃತಾ ಆಸ್ಪತ್ರೆಯಲ್ಲಿ ಮಾಡಲಾಗಿದೆ.

ಫರಿದಾಬಾದ್‌ನಲ್ಲಿ ತನ್ನ ಹೊಸ ಶಾಖೆ ಆರಂಭಿಸಲಿರುವ ಅಮೃತಾ ಆಸ್ಪತ್ರೆ ಏಷ್ಯಾದ ಅತಿದೊಡ್ಡ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ ಎನಿಸಿಕೊಳ್ಳಲಿದೆ.