Thursday, 12th September 2024

IC-814 The Kandahar Hijack: ಮಸೂದ್‌ ಅಜರ್‌ ಬಿಡುಗಡೆ ಹಿಂದಿನ ಚಿತ್ರಣ ಬಹಿರಂಗಪಡಿಸಿದ ಮಾಜಿ ಪೊಲೀಸ್‌ ಅಧಿಕಾರಿ

IC-814 The Kandahar Hijack

ಐಸಿ- 814ರ (IC-814 The Kandahar Hijack) ವಿಮಾನ ಅಪಹರಣದ ವೇಳೆ ಒತ್ತೆಯಾಳುಗಳಿಗೆ ಬದಲಾಗಿ ಭಯೋತ್ಪಾದಕ ಮೌಲಾನಾ ಮಸೂದ್ ಅಜರ್‌ನನ್ನು (terrorist Maulana Masood Azhar )  ಬಿಡುಗಡೆ ಮಾಡಿರುವುದು ದೇಶಕ್ಕೆ ಅತ್ಯಂತ ಮುಜುಗರದ ಕ್ಷಣವಾಗಿತ್ತು ಎಂದು ಜಮ್ಮು ಮತ್ತು ಕಾಶ್ಮೀರದ (jammu and kashmir) ಮಾಜಿ ಪೊಲೀಸ್ ಮಹಾನಿರ್ದೇಶಕ (Former Director General of Police) ಶೇಷ್ ಪಾಲ್ ವೈದ್ ಹೇಳಿದ್ದಾರೆ.

1999ರ ಡಿಸೆಂಬರ್ 24ರಂದು ನಡೆದ ವಿಮಾನ ಅಪಹರಣದ ಭಯಾನಕ ಘಟನೆಗಳನ್ನು ವಿವರಿಸುವ ನೆಟ್‌ಫ್ಲಿಕ್ಸ್‌ನ ಹೊಸ ಸರಣಿ ಐಸಿ-814: ದಿ ಕಂದಹಾರ್ ಹೈಜಾಕ್ ಬಿಡುಗಡೆಯಾದ ಬಳಿಕ ಐಸಿ-814 ಅಪಹರಣದ ಕುರಿತು ಚರ್ಚೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಶೇಷ್‌ ಪಾಲ್‌ ಅವರ ಹೇಳಿಕೆ ಮಹತ್ವ ಪಡೆದಿದೆ.

IC-814: Kandahar Hijack

ನೇಪಾಳದ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ 154 ಪ್ರಯಾಣಿಕರನ್ನು ಹೊತ್ತ ವಿಮಾನವನ್ನು ಐವರು ಭಯೋತ್ಪಾದಕರು ಹೈಜಾಕ್ ಮಾಡಿದ್ದರು. ಅಮೃತಸರ, ಲಾಹೋರ್, ದುಬೈ ಸೇರಿದಂತೆ ಅನೇಕ ಸ್ಥಳಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ದು ಹತ್ಯೆ ಮಾಡುವ ಬೆದರಿಕೆ ಒಡ್ಡಿದ್ದರು. ಕೊನೆಗೆ ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ವಿಮಾನವನ್ನು ನಿಲ್ಲಿಸಿದರು. ಪ್ರಯಾಣಿಕರಿಗೆ ಇದೊಂದು ಅಗ್ನಿಪರೀಕ್ಷೆಯ ಕ್ಷಣವಾಗಿತ್ತು. ಏಳು ದಿನಗಳ ಕಾಲ ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಗಿತ್ತು. ಈ ವೇಳೆ ರುಪೇನ್‌ ಕತ್ಯಾಲ್‌ ಎಂಬ ಪ್ರಯಾಣಿಕನನ್ನು ಉಗ್ರರು  ಕೊಂದಿದ್ದರು. ಮತ್ತೊಬ್ಬ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದರು.

ಅಪಹರಣಕಾರರು ಮೂವರು ಭಯೋತ್ಪಾದಕರಾದ ಮಸೂದ್ ಅಜರ್, ಅಹ್ಮದ್ ಒಮರ್ ಸಯೀದ್ ಶೇಖ್ ಮತ್ತು ಮುಷ್ತಾಕ್ ಅಹ್ಮದ್ ಜರ್ಗರ್ ಎಂಬುವರ ಬಿಡುಗಡೆಗೆ ಒತ್ತಾಯಿಸಿದ್ದರು.

IC-814: Kandahar Hijack

ಈ ಕುರಿತು ಮಾಧ್ಯಮವೊಂದಕ್ಕೆ ಮಾತನಾಡಿದ ವೈದ್, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಸಂಸ್ಥಾಪಕ ಮಸೂದ್ ಅಜರ್‌ನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಕ್ಕೆ ತೀವ್ರ ಹತಾಶೆ ಮತ್ತು ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ.

ಆ ವೇಳೆ ಜಮ್ಮುವಿನ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಆಗಿದ್ದ ಶೇಷ್ ಪಾಲ್ ವೈದ್ ಅವರಿಗೆ ಮೌಲಾನಾ ಮಸೂದ್ ಅಜರ್‌ನನ್ನು ಕೋಟ್ ಭಲ್ವಾಲ್ ಜೈಲಿನಿಂದ ಬಿಡುಗಡೆ ಮಾಡಿ ಜಮ್ಮು ತಾಂತ್ರಿಕ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ಆದೇಶಿಸಲಾಗಿತ್ತು. ಒಂದು ವೇಳೆ ನನಗೆ ಅವಕಾಶ ಕೊಟ್ಟಿದ್ದರೆ ನಾನು ಮೌಲಾನಾ ಮಸೂದ್ ಅಜರ್‌ನನ್ನು ಅಲ್ಲಿಯೇ ಕತ್ತು ಹಿಸುಕಿ ಸಾಯಿಸುತ್ತಿದ್ದೆ. ಆ ಸಮಯದಲ್ಲಿ ನನ್ನ ರಕ್ತ ಕುದಿಯುತ್ತಿತ್ತು. ನಮ್ಮ ಸರ್ಕಾರವು ಭಯೋತ್ಪಾದಕರಿಗೆ ಬಲಿಯಾಗಿದೆ ಎಂದು ತಿಳಿದು ಆಘಾತವಾಯಿತು. ಇದು ಅತ್ಯಂತ ಮುಜುಗರದ ಸಂಗತಿಯಾಗಿದೆ ಎಂದು ಹೇಳಿದರು.

ಜೈಲಿನಲ್ಲಿನ ದೃಶ್ಯವನ್ನು ವಿವರಿಸಿದ ವೈದ್, ಅಜರ್‌ನನ್ನು ಬಿಡುಗಡೆ ಮಾಡುವಂತೆ ಜೈಲು ಸೂಪರಿಂಟೆಂಡೆಂಟ್‌ಗೆ ಸೂಚಿಸಿದೆ. ಕಾನ್‌ಸ್ಟೆಬಲ್‌ಗಳಿಗೆ ಅವನ ಮುಖವನ್ನು ಮಂಕಿ ಕ್ಯಾಪ್‌ನಿಂದ ಮುಚ್ಚಲು ಆದೇಶಿಸಿದೆ. ಅಜರ್ ನಿರಾಕರಿಸಿದ. ಆದರೆ ನಾನು ಅವನನ್ನು ಮಂಡಿಯೂರುವಂತೆ ಮಾಡಿ ಅದನ್ನು ಧರಿಸುವಂತೆ ಒತ್ತಾಯಿಸಿದೆ ಎಂದು ವೈದ್ ವಿವರಿಸಿದರು.

IC-814 Kandahar Hijack

ಮಸೂದ್ ಅಜರ್‌ನನ್ನು ಜಮ್ಮು ವಿಮಾನ ನಿಲ್ದಾಣಕ್ಕೆ ಕರೆದೊಯ್ಯುವಾಗ ಅನುಭವಿಸಿದಂತಹ ಬೇಸರವನ್ನು ನಾನು ನನ್ನ ಇಡೀ ಜೀವನದಲ್ಲಿ ಎಂದಿಗೂ ಅನುಭವಿಸಿಲ್ಲ. ಅದೊಂದು ಮರೆಯಲಾಗದ ಗಾಯವಾಗಿದೆ. ಆತನನ್ನು ಬಿಡುಗಡೆ ಮಾಡುವ ಮೂಲಕ ನಮ್ಮ ರಾಷ್ಟ್ರವು ಭಾರೀ ಬೆಲೆಯನ್ನು ತೆರಬೇಕಾಯಿತು ಎಂದು ಅವರು ಹೇಳಿದರು.

ಅಪಹರಣಕ್ಕೂ ಮುನ್ನ ಕೋಟ್ ಭಾಲ್ವಾಲ್ ಜೈಲಿನಿಂದ ಅಜರ್‌ನನ್ನು ಬಿಡುಗಡೆ ಮಾಡಲು ನಡೆಸಿದ ಹಲವಾರು ಪ್ರಯತ್ನಗಳನ್ನು ವೈದ್ ಬಹಿರಂಗಪಡಿಸಿದ್ದಾರೆ. ಜೈಲಿನ ಮೇಲೆ ದಾಳಿ ಮಾಡಲು ಏಳು ಭಯೋತ್ಪಾದಕರು ನಡೆಸಿದ ಸಂಚು ಮತ್ತು ಪರಾರಿಯಾಗಲು ಸುರಂಗವನ್ನು ಅಗೆಯುವುದು ಸೇರಿದಂತೆ ಆತನ ಬಿಡುಗಡೆ ಮಾಡಲು ಹಲವು ಪಿತೂರಿಗಳು ನಡೆದಿದ್ದವು. ಆದರೆ ನಾವು ಆ ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದೆವು ಎಂದು ಅವರು ಬಹಿರಂಗಪಡಿಸಿದರು.

ಭಯೋತ್ಪಾದಕರೊಂದಿಗೆ ಕೈಜೋಡಿಸಿರುವ ಅನೇಕ ಅಧಿಕಾರಿಗಳು ಇದ್ದರು. ಇಲ್ಲದಿದ್ದರೆ, ಅಜರ್‌ನ ಪರಾರಿಗಾಗಿ ಜೈಲಿನಲ್ಲಿ ಸುರಂಗವನ್ನು ತೋಡಲು ಸಾಧ್ಯವಾಗುತ್ತಿರಲಿಲ್ಲ. ದುರದೃಷ್ಟವಶಾತ್, ರಾಷ್ಟ್ರವನ್ನು ಮಾರಾಟ ಮಾಡುವ ಭ್ರಷ್ಟರು ನಮ್ಮ ವ್ಯವಸ್ಥೆಯಲ್ಲಿದ್ದಾರೆ ಎಂದು ವೈದ್ ಆರೋಪಿಸಿದರು.

ಕೆ. ಚಂದ್ರಶೇಖರ್ ರಾವ್ ಶೀಘ್ರದಲ್ಲೇ ವಿಆರ್‌ಎಸ್ ತೆಗೆದುಕೊಳ್ಳಲಿದ್ದಾರೆ: ಜೆಪಿ ನಡ್ಡಾ

ವಿಮಾನ ಅಪಹರಣದ ಸಂದರ್ಭದಲ್ಲಿ ಆಗಿನ ವಾಜಪೇಯಿ ಸರ್ಕಾರವು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಯಿತು ಎಂದು ಟೀಕಿಸಿದ ಅವರು, ನಮ್ಮ ಅಸಮರ್ಥ ಅಧಿಕಾರಶಾಹಿಯು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಅವರು ಗೊಂದಲಕ್ಕೊಳಗಾದರು ಮತ್ತು ರಾಷ್ಟ್ರವನ್ನು ಅಪಾರ ಮುಜುಗರಕ್ಕೆ ಒಳಪಡಿಸಿದರು ಎಂದು ಅವರು ವಿಷಾದದಿಂದ ಹೇಳಿದರು.

Leave a Reply

Your email address will not be published. Required fields are marked *