Wednesday, 11th December 2024

IC 814 The Kandahar Hijack: ಕಂದಹಾರ್‌ ವಿಮಾನ ಹೈಜಾಕ್ ವೇಳೆ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟ ರೂಪಿನ್ ಕತ್ಯಾಲ್ ಪತ್ನಿ ರಚನಾ ಕತ್ಯಾಲ್ ಈಗೇನು ಮಾಡುತ್ತಿದ್ದಾರೆ?

IC 814 The Kandahar Hijack

1999ರ ಡಿಸೆಂಬರ್ 24ರಂದು ಐವರು ಭಯೋತ್ಪಾದಕರು 170ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಇಂಡಿಯನ್ ಏರ್‌ಲೈನ್ಸ್ (Indian Airlines flight) ಐಸಿ 814 ವಿಮಾನವನ್ನು ಹೈಜಾಕ್ (IC 814 The Kandahar Hijack) ಮಾಡಿದ್ದರು. ಪ್ರಯಾಣಿಕರ ಸುರಕ್ಷತೆಗಾಗಿ ಕೋಟ್ಯಂತರ ಭಾರತೀಯರು ಪ್ರಾರ್ಥಿಸಿದ್ದರು. ಇದರ ಭಯಾನಕ ನೆನಪು ಇನ್ನೂ ಹಲವಾರು ಮಂದಿಯ ಮನಸ್ಸಿನಲ್ಲಿ ಹಾಗೆಯೇ ಉಳಿದಿದೆ.

ಒಂದು ವಾರಕ್ಕೂ ಹೆಚ್ಚು ಕಾಲ ಭಯೋತ್ಪಾದಕರು ವಿಮಾನದಲ್ಲಿ ಪ್ರಯಾಣಿಕರನ್ನು ಸೆರೆ ಹಿಡಿದಿಟ್ಟಿದ್ದರು. ಭಾರತ ಸರ್ಕಾರವು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ಪ್ರಯಾಣಿಕರನ್ನು ಬಿಡುಗಡೆ ಮಾಡುವಲ್ಲಿ ಯಶಸ್ವಿಯಾದರೂ ಒಬ್ಬ ಪ್ರಯಾಣಿಕ ರೂಪಿನ್ ಕತ್ಯಾಲ್ (Rupin Katyal) ಕೊಲ್ಲಲ್ಪಟ್ಟಿದ್ದರು. ಇತ್ತೀಚೆಗೆ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾದ ಐಸಿ814 ದಿ ಕಂದಹಾರ್ ಹೈಜಾಕ್ ವೆಬ್ ಸರಣಿ ಈ ಕಥೆಯನ್ನು ಒಳಗೊಂಡಿದೆ.

IC 814 The Kandahar Hijack

ಅನುಭವ್ ಸಿನ್ಹಾ ಅವರ ಈ ವೆಬ್ ಸರಣಿಯಲ್ಲಿ ವಿಜಯ್ ವರ್ಮಾ, ದಿಯಾ ಮಿರ್ಜಾ ಮತ್ತು ಪತ್ರಲೇಖಾ ನಟಿಸಿದ್ದು, ಹೃದಯ ವಿದ್ರಾವಕ ನೈಜ-ಜೀವನದ ಕಥೆಯನ್ನು ವರ್ಣಿಸಿದೆ.

ಹತ್ಯೆಗೀಡಾದ ನವ ವಿವಾಹಿತ ರೂಪಿನ್ ಕತ್ಯಾಲ್

20 ವರ್ಷದ ನವ ವಿವಾಹಿತೆ ರಚನಾ ಕತ್ಯಾಲ್ ಅಪಹರಣಕ್ಕೊಳಗಾದ ಐಸಿ-814 ವಿಮಾನದಲ್ಲಿದ್ದಳು. ಆಕೆ ತನ್ನ ಪತಿ ರೂಪಿನ್ ಕತ್ಯಾಲ್ ಜೊತೆ 21 ದಿನಗಳ ಹನಿಮೂನ್ ಮುಗಿಸಿ ಕಠ್ಮಂಡುವಿನಿಂದ ಹಿಂತಿರುಗುತ್ತಿದ್ದಳು. ವೆಬ್ ಸೀರೀಸ್ ನಲ್ಲಿ ರೇಣುಕಾ ಪುರೋಹಿತ್ ರಚನಾ ಕತ್ಯಾಲ್ ಪಾತ್ರವನ್ನು ನಿರ್ವಹಿಸಿದ್ದಾರೆ. ವ್ಯಾಪಾರಿಯಾಗಿದ್ದ ರೂಪಿನ್ ಕತ್ಯಾಲ್ 1999ರ ಡಿಸೆಂಬರ್ 3ರಂದು ಸೋನೆಪತ್‌ನ ಗುಹಾನಾದ ರಚನಾ ಕತ್ಯಾಲ್ ಅವರನ್ನು ವಿವಾಹವಾಗಿದ್ದರು.

ರೂಪಿನ್ ಅವರೊಂದಿಗಿನ ಮೊದಲ ಭೇಟಿಯ ಬಗ್ಗೆ ಮಾತನಾಡಿದ್ದ ರಚನಾ, ಸುಶಿಕ್ಷಿತರು, ಬುದ್ಧಿವಂತರು ಮತ್ತು ಉತ್ತಮ ಸ್ವಭಾವದವರಾಗಿದ್ದ ರೂಪಿನ್ ನನ್ನು ಪೋಷಕರು ಆಯ್ಕೆ ಮಾಡಿದ್ದರು. ಮೊದಲ ಭೇಟಿಯಲ್ಲೇ ರೂಪಿನ್ ನನ್ನು ಇಷ್ಟಪಟ್ಟೆ ಎಂಬುದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಹೈಜಾಕ್ ಆದ ಮೊದಲ ದಿನವೇ ರಚನಾ ಕತ್ಯಾಲ್ ಅವರಿಗೆ ಪತಿ ರೂಪಿನ್ ಕತ್ಯಾಲ್ ಸಾವಿನ ಬಗ್ಗೆ ತಿಳಿದಿರಲಿಲ್ಲ. ಹೈಜಾಕ್ ಮಾಡಿದ ಮೊದಲ ದಿನವೇ ರೂಪಿನ್ ಕತ್ಯಾಲ್ ಅವರನ್ನು ಇತರ ಒಂಬತ್ತು ಪ್ರಯಾಣಿಕರೊಂದಿಗೆ ಸ್ಥಳಾಂತರಿಸುವ ಸಂದರ್ಭದಲ್ಲಿ ಕೊಲ್ಲಲಾಯಿತು. ತಂದೆ ತಾಯಿಗೆ ಒಬ್ಬನೇ ಮಗನಾಗಿದ್ದ ರೂಪಿನ್ ಕ್ರೂರವಾಗಿ ಸಾವನ್ನಪ್ಪಿದ್ದರು. ಅವರ ದೇಹವನ್ನು ದುಬೈನಲ್ಲಿ ವಿಮಾನದಿಂದ ಕೆಳಕ್ಕೆ ಎಸೆಯಲಾಗಿತ್ತು. ಆದರೆ ರಚನಾ ಅವರಿಗೆ ಪತಿಯ ಸಾವಿನ ಬಗ್ಗೆ ಮಾಹಿತಿಯನ್ನು ನೀಡಿರಲಿಲ್ಲ. ಹೀಗಾಗಿ ರೂಪಿನ್ ದುಬೈನ ಆಸ್ಪತ್ರೆಯಲ್ಲಿದ್ದಾರೆ ಎಂದು ಅವರು ನಂಬಿದ್ದರು. ರಚನಾ ಕತ್ಯಾಲ್ ಅವರ ತಾಯಿ, ಅತ್ತೆ ಮನೆಯವರೆಲ್ಲರೂ ರೂಪಿನ್ ಸಾವಿನ ಬಗ್ಗೆ ಅವಳಿಂದ ಮರೆಮಾಡಲು ಪ್ರಯತ್ನಿಸಿದರು. ಮಾಧ್ಯಮಗಳ ಕಣ್ಣಿನಿಂದ ಆಕೆಯನ್ನು ದೂರವಿಡಲು ಪ್ರಯತ್ನಿಸಿದ್ದರು.

IC 814 The Kandahar Hijack

ಹೈಜಾಕ್ ಆದ ವಿಮಾನದಿಂದ ಇಳಿದ ತಕ್ಷಣ ಅವಳ ಮಾವ ರೂಪಿನ್ ಆಸ್ಪತ್ರೆಯಲ್ಲಿದ್ದಾನೆ ಎಂದು ಹೇಳಿ ಬೇಗನೆ ಮನೆಗೆ ಕರೆದುಕೊಂಡು ಹೋದರು. ಗಂಡನ ಅಂತಿಮ ಕ್ರಿಯೆಯನ್ನೂ ತೋರಿಸಲಿಲ್ಲ. ಇದಾಗಿ ಬಹಳ ದಿನಗಳ ಅನಂತರ ಅವಳು ಪದೇಪದೇ ಗಂಡನನ್ನು ನೋಡಬೇಕು ಎಂದು ಹಠ ಹಿಡಿದಾಗ ಮನೆಯವರಿಗೆ ಅವಳಿಂದ ಸತ್ಯವನ್ನು ಮುಚ್ಚಿಡುವುದು ಅಸಾಧ್ಯವಾಯಿತು. ಮಾವ ಅಂತಿಮವಾಗಿ ರೂಪಿನ್ ನ ಫೋಟೋ ತೋರಿಸಿ ಅವನಿಂದ ನಮಗಿರುವುದು ಇಷ್ಟೇ ಎಂದು ಹೇಳಿದರು.

ರೂಪಿನ್ ಕತ್ಯಾಲ್ ಮರಣದ ಬಳಿಕ ಮಾವ ರಚನಾ ಕತ್ಯಾಲ್ ಅವರನ್ನು ದತ್ತು ಪಡೆದರು. ಅವಳಿಗಾಗಿ ಏರ್ ಲೈನ್ಸ್ ನಲ್ಲಿ ಕೆಲಸ ಕೇಳಿ ಅವಳನ್ನು ಇಂಡಿಯನ್ ಏರ್ ಲೈನ್ಸ್ ಸಿಬ್ಬಂದಿ ವಿಭಾಗಕ್ಕೆ ಸೇರಿಸಿದರು. ಈ ಕೆಲಸವು ಆಕೆಗೆ ಹೊಸ ಬದುಕನ್ನು ನೀಡಿತು. ಆಕೆಯ ಅತ್ತೆಯವರೇ ಮರು ಮದುವೆಗೆ ಒತ್ತಾಯಿಸಿದರು. 2001ರಲ್ಲಿ ರಚನಾ ಮರುಮದುವೆಯಾದರು ಮತ್ತು 2002ರಲ್ಲಿ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದರು. ರಚನಾ ಕತ್ಯಾಲ್ ಮತ್ತು ರೂಪಿನ್ ಕತ್ಯಾಲ್ ಅವರ ಅಲ್ಪಾವಧಿಯ ದಾಂಪತ್ಯ ಜೀವನದ ಕಥೆಯನ್ನು ಈ ವೆಬ್ ಸರಣಿ ಒಳಗೊಂಡಿದೆ.