Saturday, 14th December 2024

ಪಿಜ್ಜಾ ಡೆಲಿವರಿಗೆ ಅವಕಾಶ ಇರುವಾಗ, ಆಹಾರ ಧಾನ್ಯ ಸರಬರಾಜಿಗೇಕೆ ತಡೆ ?: ಕೇಜ್ರಿವಾಲ್ ಪ್ರಶ್ನೆ

ನವದೆಹಲಿ: ನ್ಯಾಯಬೆಲೆ ಅಂಗಡಿಗಳು ಕರೋನಾ ಸೋಂಕು ಹರಡುವ ಹಾಟ್ ಸ್ಪಾಟ್ ಗಳಾಗಿವೆ. ಈ ನಿಟ್ಟಿನಲ್ಲಿ ಪಡಿತರ ಧಾನ್ಯಗಳನ್ನು ಮನೆ ಬಾಗಿಲಿಗೆ ತಲುಪಿಸಲು ಅವಕಾಶ ಮಾಡಿಕೊಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಸೋಂಕು ಹೆಚ್ಚಿರುವ ಕಾರಣಕ್ಕೆ ಕೇಜ್ರಿವಾಲ್ ಸರ್ಕಾರ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಆಹಾರ ಧಾನ್ಯವನ್ನು ಸರಬರಾಜು ಮಾಡುವ ಮಹತ್ವಾಂಕ್ಷೆ ಯೋಜನೆಗೆ ಚಾಲನೆ ನೀಡಿತ್ತು. ಆದರೆ ಕೇಂದ್ರ ಸರ್ಕಾರ ಅದಕ್ಕೆ ತಡೆಯಾಜ್ಞೆ ನೀಡಿದೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಮನೆ ಬಾಗಿಲಿಗೆ ಪಿಜ್ಜಾ ಸರಬರಾಜು ಮಾಡಲು ಅವಕಾಶ ಇರುವಾಗ ಬಡವರ ಮನೆ ಬಾಗಿಲಿಗೆ ಅಕ್ಕಿಕಾಳ ನೀಡಲು ಅವಕಾಶ ಇಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.

ಬಡವರ್ಗಕ್ಕೆ ನೆರವಾಗುವ ನಿಟ್ಟಿನಲ್ಲಿ ಮನೆ ಬಾಗಿಲಿಗೆ ಆಹಾರ ಧಾನ್ಯಗಳನ್ನು ಸರಬರಾಜು ಮಾಡಲಾಗುತ್ತಿತ್ತು. ನ್ಯಾಯಬೆಲೆ ಅಂಗಡಿಗಳ ಬಳಿ ಜನ ಗುಂಪುಗೂಡುವುದರಿಂದ ಸೋಂಕು ಹರಡುವಿಕೆ ಹೆಚ್ಚಾಗುತ್ತಿದೆ. ಅದಕ್ಕಾಗಿ ದೆಹಲಿಯ 72 ಲಕ್ಷ ಪಡಿತರ ಚೀಟಿದಾರರ ಮನೆ ಬಾಗಿಲಿಗೆ ಆಹಾರ ಧಾನ್ಯ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಮನೆ ಬಾಗಿಲಿಗೆ ಆಹಾರ ಸರಬರಾಜು ಮಾಡುವ ಯೋಜನೆಗೆ ಕೇಜ್ರಿವಾಲ್ ಸರ್ಕಾರ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ತಡೆ ನೀಡಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್ ನಮ್ಮ ಸರ್ಕಾರ ಒಂದಲ್ಲ ಐದು ಬಾರಿ ಅನುಮತಿ ಪಡೆದಿದೆ, ವಾಸ್ತವವಾಗಿ ಅನುಮತಿ ಪಡೆಯುವ ಅಗತ್ಯ ಇಲ್ಲ, ಆದರೂ ಸೌಜನ್ಯಕ್ಕಾಗಿ ಅನುಮತಿ ಪಡೆದಿದ್ದೇವೆ ಎಂದಿದ್ದಾರೆ.