Tuesday, 17th September 2024

ಅಕ್ರಮ ಗಣಿಗಾರಿಕೆ ಪ್ರಕರಣ: ಜಾರಿ ನಿರ್ದೇಶನಾಲಯದ ದಾಳಿ

ಚಂಡೀಗಢ: ಹರಿಯಾಣದ ಯಮುನಾ ನಗರ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪ ಸಂಬಂಧ ಕಾಂಗ್ರೆಸ್ ಶಾಸಕ ಸುರೇಂದರ್ ಪನ್ವಾರ್, ಐಎನ್ಎಲ್ಡಿ ಮಾಜಿ ಶಾಸಕ ದಿಲ್ಬಾಗ್ ಸಿಂಗ್ ಮತ್ತು ಇತರ ಕೆಲವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ಗುರುವಾರ ದಾಳಿ ನಡೆಸಿದೆ.
ಯಮುನಾ ನಗರ, ಸೋನಿಪತ್, ಮೊಹಾಲಿ, ಫರಿದಾಬಾದ್, ಚಂಡೀಗಢ ಮತ್ತು ಕರ್ನಾಲ್ನಲ್ಲಿ ಇಬ್ಬರು ರಾಜಕಾರಣಿಗಳ 20 ಸ್ಥಳಗಳು ಮತ್ತು ಸಂಬಂಧಿತ ಘಟಕಗಳಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಪನ್ವಾರ್, ಸೋನಿ ಪತ್ನ ಶಾಸಕರಾದರೆ, ಸಿಂಗ್ ಅವರು ಭಾರತ ರಾಷ್ಟ್ರೀಯ ಲೋಕ ದಳದಿಂದ (ಐಎನ್ಎಲ್ಡಿ) ಯಮುನಾ ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಇ.ಡಿ ಅಧಿಕಾರಿಗಳಿಗೆ ಕೇಂದ್ರೀಯ ಅರೆಸೇನಾ ಪಡೆಗಳ ಸಶಸ್ತ್ರ ಸಿಬ್ಬಂದಿ ಬೆಂಗಾವಲಾಗಿ ನಿಂತಿದೆ. ಗುತ್ತಿಗೆ ಅವಧಿ ಮುಗಿದು, ಗಣಿಗಾರಿಕ ನಡೆಸದಂತೆ ನ್ಯಾಯಾಲಯದ ಆದೇಶವಿದ್ದರೂ ಯಮುನಾ ನಗರ ಮತ್ತು ಸಮೀಪದ ಜಿಲ್ಲೆಗಳಲ್ಲಿ ಬಂಡೆಗಳು, ಜಲ್ಲಿ ಮತ್ತು ಮರಳು ಅಕ್ರಮ ಗಣಿಗಾರಿಕೆ ನಡೆಸಿರುವ ಕುರಿತು ಹರಿಯಾಣ ಪೊಲೀಸರು ದಾಖಲಿಸಿದ್ದ ಹಲವು ಎಫ್ಐಆರ್ಗಳನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ.
ರಾಯಧನ ಮತ್ತು ತೆರಿಗೆಗಳ ಸಂಗ್ರಹ ವನ್ನು ಸರಳಗೊಳಿಸಲು ಮತ್ತು ಗಣಿಗಾರಿಕೆ ಪ್ರದೇಶಗಳಲ್ಲಿ ತೆರಿಗೆ ವಂಚನೆ ತಡೆಗಟ್ಟಲು ಹರಿಯಾಣ ಸರ್ಕಾರವು 2020ರಲ್ಲಿ ಜಾರಿಗೆ ತಂದ ಆನ್ಲೈನ್ ಪೋರ್ಟಲ್ ‘ಇ-ರಾವಣ್’ ಯೋಜನೆಯಲ್ಲಿನ ವಂಚನೆಯನ್ನೂ ಇ.ಡಿ ತನಿಖೆ ನಡೆಸುತ್ತಿದೆ.

Leave a Reply

Your email address will not be published. Required fields are marked *