Thursday, 3rd October 2024

Indians Rescue: ರಷ್ಯಾ ಸೇನೆ ಅಕ್ರಮವಾಗಿ ಸೇರಿರುವ 45 ಭಾರತೀಯರ ರಕ್ಷಣೆ

Indians Rescue

ಮಾಸ್ಕೊ: ಅಕ್ರಮವಾಗಿ ರಷ್ಯಾ ಸೇನೆಗೆ (Russian army) ಸೇರಿಸಿ ಉಕ್ರೇನ್ (Russia-Ukraine war) ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದ 45 ಭಾರತೀಯರನ್ನು ಯುದ್ಧ ವಲಯದಿಂದ ರಕ್ಷಿಸಲಾಗಿದೆ (Indians Rescue). ಅವರನ್ನು ರಷ್ಯಾದ ಮಿಲಿಟರಿಯಿಂದ ಬಿಡುಗಡೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ (Ministry of External Affairs) ಗುರುವಾರ ತಿಳಿಸಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಇನ್ನೂ ಐವತ್ತು ಭಾರತೀಯರು ಇದ್ದಾರೆ. ಅವರನ್ನು ರಕ್ಷಿಸಿ ಬಿಡುಗಡೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

Indians Rescue

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ರಷ್ಯಾದ ಸೈನ್ಯಕ್ಕೆ ಒತ್ತಾಯಪೂರ್ವಕವಾಗಿ ಸೇರಿಸಲ್ಪಟ್ಟಿರುವ ಮತ್ತು ಉಕ್ರೇನ್‌ ವಿರುದ್ದದ ಹೋರಾಟದಲ್ಲಿ ಯುದ್ಧಭೂಮಿಗೆ ಹೋಗಲು ಒತ್ತಾಯಿಸಲ್ಪಟ್ಟಿರುವ ಎಲ್ಲಾ ಭಾರತೀಯರನ್ನು ರಷ್ಯಾ ಬಿಡುಗಡೆ ಮಾಡುತ್ತದೆ ಎಂದು ವ್ಲಾಡಿಮಿರ್ ಅವರು ಮೋದಿಗೆ ಭರವಸೆ ನೀಡಿದ್ದರು.

ರಷ್ಯಾ ಸೇನೆ ಸೇರಲು ಒತ್ತಾಯ

ನವದೆಹಲಿಯಿಂದ ತಮಿಳುನಾಡಿನ ವರೆಗೆ ವಿಸ್ತರಿಸಿರುವ ಮಾನವ ಕಳ್ಳಸಾಗಣೆ ಜಾಲದ ಮೂಲಕ ಅನೇಕ ಭಾರತೀಯರನ್ನು ರಷ್ಯಾದ ಸೇನೆಗೆ ಸೇರಲು ಒತ್ತಾಯಿಸಲಾಗುತ್ತದೆ. ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಸ್ಥಳೀಯ ಏಜೆಂಟರನ್ನು ಬಳಸಿಕೊಂಡು ಜನರನ್ನು ರಷ್ಯಾಕ್ಕೆ ಆಕರ್ಷಿಸಲು ಲಾಭದಾಯಕ ಉದ್ಯೋಗದ ಭರವಸೆ ನೀಡಲಾಗುತ್ತದೆ.

ಉದ್ಯೋಗದ ಭರವಸೆಯಲ್ಲಿ ರಷ್ಯಾವನ್ನು ತಲುಪಿದ ಅನಂತರ ಅವರ ಪಾಸ್‌ಪೋರ್ಟ್‌ಗಳನ್ನು ಕಸಿದುಕೊಂಡು ಅವರಿಗೆ ಯುದ್ಧ ತರಬೇತಿಗಳನ್ನು ನೀಡಲಾಗುತ್ತದೆ. ಇದರಲ್ಲಿ ನೂರಾರು ಭಾರತೀಯ ಪ್ರಜೆಗಳು ಸಿಕ್ಕಿಬಿದ್ದಿದ್ದಾರೆ. ರಷ್ಯಾ- ಉಕ್ರೇನ್ ಸಂಘರ್ಷದ ವೇಳೆ ನಾಲ್ಕು ಭಾರತೀಯರು ಸಾವನ್ನಪ್ಪಿದ್ದಾರೆ.

ನಾಲ್ವರ ಬಂಧನ

ಈ ಉದ್ಯೋಗದ ದಂಧೆಯಲ್ಲಿ ತೊಡಗಿದ್ದ ನಾಲ್ವರನ್ನು ಭಾರತೀಯ ಪೊಲೀಸರು ಬಂಧಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ವೈರಲ್ ಆಗಿದ್ದ ವಿಡಿಯೋವೊಂದು ಈ ದಂಧೆಯನ್ನು ಬಹಿರಂಗಪಡಿಸಿತ್ತು. ಪಂಜಾಬ್ ಮತ್ತು ಹರಿಯಾಣದ ವ್ಯಕ್ತಿಗಳು ಇದಕ್ಕೆ ಬಲಿಪಶುಗಳಾಗಿದ್ದು, ಅವರು ಸಹಾಯಕ್ಕಾಗಿ ಮನವಿ ಮಾಡಿದ್ದರು. ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ 10 ಭಾರತೀಯರನ್ನು ಇದುವರೆಗೆ ಮರಳಿ ಕರೆತರಲಾಗಿದೆ.

ಕಠಿಣ ಕ್ರಮ

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಪರವಾಗಿ ಹೋರಾಡುವಂತೆ ಕೇರಳದ ವಿದ್ಯಾರ್ಥಿಗಳನ್ನು ವಂಚಿಸಿದ ಏಜೆಂಟರ ವಿರುದ್ಧ “ಕಠಿಣ ಕಾನೂನು ಕ್ರಮ” ತೆಗೆದುಕೊಳ್ಳಲಾಗುವುದು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

Muda Scam: ಸಿಎಂ ವಿರುದ್ಧ ಪಾಸಿಕ್ಯೂಷನ್‌ ಪ್ರಶ್ನಿಸಿ ಅರ್ಜಿ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಯಾವುದೇ ಭಾರತೀಯನನ್ನು ಸಂಘರ್ಷ ವಲಯಕ್ಕೆ ಕೊಂಡೊಯ್ಯುವುದು ಮತ್ತು ಯಾವುದೇ ರೀತಿಯಲ್ಲಿ ಸಂಘರ್ಷಕ್ಕಾಗಿ, ಸೈನ್ಯಕ್ಕಾಗಿ ಕೆಲಸ ಮಾಡುವಂತೆ ಮಾಡುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲಎಂದು ಅವರು ಹೇಳಿದ್ದಾರೆ.