Saturday, 14th December 2024

ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಮೇಲೆ ತೆರಿಗೆ ವಿಧಿಸುವುದಿಲ್ಲ: ಕೇಂದ್ರ ಸ್ಪಷ್ಟನೆ

ಅನಿವಾಸಿ ಭಾರತೀಯರ ಮೇಲೆ ತೆರಿಗೆ ವಿಧಿಸುವ ಹೊಸ ಮಸೂದೆಯೊಂದರ ಕುರಿತು ಎದ್ದಿದ್ದ ಗೊಂದಲಗಳನ್ನು ಸ್ಪಷ್ಟಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಇತರ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರನ್ನು ತೆರಿಗೆ ಜಾಲದಲ್ಲಿ ತರುವ ಉದ್ದೇಶ ಈ ನಡೆಯಲ್ಲಿ ಇಲ್ಲ ಎಂದಿದೆ.

ಕೊಲ್ಲಿಯಲ್ಲಿ ಕೆಲಸ ಮಾಡುತ್ತಿರುವ ದೊಡ್ಡ ಸಂಖ್ಯೆಯ ಭಾರತೀಯರನ್ನು ತೆರಿಗೆ ವ್ಯಾಪ್ತಿಯಲ್ಲಿ ತರಬಹುದು ಎಂಬ ಅಂತೆ-ಕಂತೆಗಳು ಎದ್ದಿರುವ ಕಾರಣ ಕೇಂದ್ರ ಈ ಸ್ಪಷ್ಟನೆ ನೀಡಿದೆ.

ಹಣಕಾಸು ಮಸೂದೆ, 2020ರ ಪ್ರಕಾರ, ಭಾರತೀಯ ಪ್ರಜೆಯೊಬ್ಬ ತಾನು ವಾಸಿಸುತ್ತಿರುವ ಯಾವುದೇ ದೇಶ ಅಥವಾ ವ್ಯಾಪ್ತಿಯೊಳಗೆ ತೆರಿಗೆ ಪಾವತಿ ಮಾಡದೇ ಇದ್ದಲ್ಲಿ, ಆತನನ್ನು ಭಾರತೀಯ ವಾಸಿ ಎಂದು ಪರಿಗಣಿಸಬಹುದೆಂಬ ಅಂಶವೊಂದನ್ನು ಸೇರಿಸಿದೆ. ಭಾರತದಲ್ಲಿ ತೆರಿಗೆ ಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳಲು ಕಡಿಮೆ ಅಥವಾ ತೆರಿಗೆ ರಹಿತ ದೇಶಗಳಲ್ಲಿ ವಾಸಿಸುವ ಮೂಲಕ ತೆರಿಗೆ ವಂಚನೆ ಮಾಡುವ ಕೆಲ ಭಾರತೀಯ ಪ್ರಜೆಗಳಿಗೆ ಇದು ಅನ್ವಯಿಸಲಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

“ಮಧ್ಯಪೂರ್ವ ಸೇರಿದಂತೆ ವಿದೇಶಗಳಲ್ಲಿ, ಕಾನೂನು ಬದ್ಧ ರೀತಿಯಲ್ಲಿ, ’ಅಸಲಿ’ ನೌಕರರಾಗಿ ಕೆಲಸ ಮಾಡುತ್ತಿರುವ, ಹಾಗೂ ಈ ದೇಶಗಳಲ್ಲಿ ತೆರಿಗೆ ಪಾವತಿ ಮಾಡುವ ಅಗತ್ಯವಿಲ್ಲದವರ ಸಂಪಾದನೆಗಳ ಮೇಲೆ ಭಾರತದಲ್ಲಿ ತೆರಿಗೆ ವಿಧಿಸಲಾಗುತ್ತದೆ ಎಂದು ಮಾಧ್ಯಮಗಳ ಕೆಲ ವರ್ತುಲಗಳಲ್ಲಿ ಮಸೂದೆಯ ಬಗ್ಗೆ ತಪ್ಪಾದ ಅರ್ಥ ಕಲ್ಪಿಸಲಾಗುತ್ತಿದೆ,” ಎಂದ ಕೇಂದ್ರ ನೇರ ತೆರಿಗೆ ಮಂಡಳಿ, ಈ ವಿಚಾರವಾಗಿ ಸ್ಪಷ್ಟನೆ ನೀಡಿದೆ.

“ಉದ್ದೇಶಿತ ಕಾಯಿದೆ ಪ್ರಕಾರ, ಯಾವುದೇ ಭಾರತೀಯ ವಾಸಿ ಎಂದು ಪರಿಗಣಿಸಲಾದ ದೇಶದ ಯಾವುದೇ ಪ್ರಜೆಯು ದೇಶದ ಹೊರಗೆ ಸಂಪಾದನೆ ಮಾಡಿದ ಹಣದ ಮೇಲೆ ತೆರಿಗೆ ವಿಧಿಸಲಾಗುವುದಿಲ್ಲ. ಆದರೆ ಭಾರತದಲ್ಲಿ ಉದ್ಯಮ ನಡೆಸುತ್ತಾ ಅಥವಾ ವೃತ್ತಿ ನಡೆಸಿಕೊಂಡು ಸಂಪಾದನೆ ಮಾಡಿದ ಆದಾಯದ ಮೇಲೆ ತೆರಿಗೆ ಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳಲು ವಿದೇಶಗಳಲ್ಲಿ ನೆಲೆಸುವವರ ಮೇಲೆ ಇದು ಅನ್ವಯಿಸುತ್ತದೆ. ಅಗತ್ಯವಿದ್ದಲ್ಲಿ, ಕಾನೂನಿನ ಭಾಗವಾಗಿ ಈ ಕುರಿತಂತೆ ಸ್ಪಷ್ಟನೆಯನ್ನು ಸಹ ವಿವರಿಸಲಾಗುವುದು,” ಎಂದು CBDT ಹೇಳಿಕೆಯನ್ನು ತಿಳಿಸಲಾಗಿದೆ.

ವೈಯಕ್ತಿಕ ಆದಾಯದ ಮೇಲೆ ಯಾವುದೇ ತೆರಿಗೆ ಇಲ್ಲದ ಕೊಲ್ಲಿ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಸಂಪಾದಿಸುವ ಹಣದ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ ಎಂದು ಮಾಧ್ಯಮಗಳಲ್ಲಿ ವರದಿಗಳು ಬಿತ್ತರವಾದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆಯನ್ನು ಕೇಂದ್ರ ಸರ್ಕಾರ ನೀಡಿದೆ.

ಈ ಮುನ್ನ, 183 ದಿನಗಳು ಅಥವಾ ಆರು ತಿಂಗಳ ಮಟ್ಟಿಗೆ ದೇಶದ ಆಚೆ ಇದ್ದುಕೊಂಡು ತಮ್ಮ ಅನಿವಾಸಿ ಭಾರತೀಯ ಸ್ಟೇಟಸ್‌ಅನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುತ್ತಿದ್ದ ಭಾರತೀಯರ ಮೇಲೆ ಕೇಂದ್ರ ಸರ್ಕಾರ ಸ್ಕ್ರೂಗಳನ್ನು ಟೈಟ್ ಮಾಡಿದೆ. ಅನಿವಾಸಿ ಭಾರತೀಯರು ಎನಿಸಿಕೊಳ್ಳಲು ವಿದೇಶದಲ್ಲಿ ನೆಲೆಸಬೇಕಾದ ಕನಿಷ್ಠ ದಿನಗಳನ್ನು 245 ದಿನಗಳಿಗೆ ಏರಿಸಲು ಹಣಕಾಸು ಮಸೂದೆ ಕೋರುತ್ತಿದೆ.