Thursday, 3rd October 2024

Forex Reserves : ಭಾರತದ ವಿದೇಶಿ ವಿನಿಮಯ ಮೀಸಲು ಸಾರ್ವಕಾಲಿಕ ಗರಿಷ್ಠ 689.458 ಬಿಲಿಯನ್ ಡಾಲರ್‌ಗೆ ಏರಿಕೆ

Forex Reserves

ನವದೆಹಲಿ: ಸೆಪ್ಟೆಂಬರ್ 13 ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು (Forex Reserves) 223 ಮಿಲಿಯನ್ ಡಾಲರ್ ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ 689.458 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿ ಅಂಶಗಳು ಹೇಳಿವೆ. ಇದು ಸತತವಾಗಿ ಐದು ವಾರಗಳ ಬೆಳವಣಿಗೆಯಾಗಿದೆ. ಹಿಂದಿನ ವರದಿಯ ಪ್ರಕಾರ 5.248 ಬಿಲಿಯನ್ ಡಾಲರ್ ಏರಿಕೆಯಾಗಿ ದಾಖಲೆಯ 689.235 ಬಿಲಿಯನ್ ಡಾಲರ್‌ಗೆ ತಲುಪಿತ್ತು.

ಆಗಸ್ಟ್ 9 ಮತ್ತು ಸೆಪ್ಟೆಂಬರ್ 13ರ ನಡುವಿನ ಸುಮಾರು ಒಂದು ತಿಂಗಳಲ್ಲಿ, ಭಾರತದ ವಿದೇಶಿ ವಿನಿಮಯವು ಶೇಕಡಾ 2.88 ರಷ್ಟು ಏರಿಕೆಯಾಗಿ 670.119 ಬಿಲಿಯನ್ ಡಾಲರ್‌ನಿಂದ 689.458 ಡಾಲರ್ಗೆ ತಲುಪಿತ್ತು. ಸೆಪ್ಟೆಂಬರ್ 13ಕ್ಕೆ ಕೊನೆಗೊಂಡ ವಾರದಲ್ಲಿ, ವಿದೇಶಿ ಕರೆನ್ಸಿ ಸ್ವತ್ತುಗಳು 603.629 ಬಿಲಿಯನ್ ಡಾಲರ್‌ನಿಂದ 555 ಮಿಲಿಯನ್ ಡಾಲರ್ ಇಳಿದಿದೆ ಎಂದು ಅಂಕಿ ಅಂಶಗಳು ಹೇಳಿವೆ.

ಇದನ್ನೂ ಓದಿ: Stock Market: ಷೇರುಪೇಟೆಯಲ್ಲಿ ಗೂಳಿ ನೆಗೆತ; ಹೊಸ ದಾಖಲೆ ಬರೆದ ಸೆನ್ಸೆಕ್ಸ್‌, ನಿಫ್ಟಿ

ಈ ವಾರದಲ್ಲಿ ಚಿನ್ನದ ಮೀಸಲು 899 ಮಿಲಿಯನ್ ಡಾಲರ್ ಏರಿಕೆಯಾಗಿ 62.887 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಆರ್‌ಬಿಐ ತಿಳಿಸಿದೆ. ವಿಶೇಷ ಡ್ರಾಯಿಂಗ್ ಹಕ್ಕುಗಳು (ಎಸ್‌ಡಿಆರ್) 53 ಮಿಲಿಯನ್ ಡಾಲರ್‌ನಷ್ಟು ಇಳಿಕೆಯಾಗಿದ್ದು 18.419 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಅಪೆಕ್ಸ್ ಬ್ಯಾಂಕ್ ತಿಳಿಸಿದೆ.

ಐಎಂಎಫ್‌ನೊಂದಿಗಿನ ಭಾರತದ ಮೀಸಲು ಸ್ಥಾನವು ವರದಿಯ ವಾರದಲ್ಲಿ 108 ಮಿಲಿಯನ್ ಡಾಲರ್‌ನಿಂದ 4.523 ಬಿಲಿಯನ್ ಡಾಲರ್‌ಗೆ ಇಳಿದಿದೆ ಎಂದು ಅಪೆಕ್ಸ್ ಬ್ಯಾಂಕ್ ಅಂಕಿ ಅಂಶಗಳು ತಿಳಿಸಿವೆ.