Friday, 13th December 2024

IndiGo‍ Flight: ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ; 24 ಗಂಟೆ ಇಸ್ತಾಂಬುಲ್‌ ಏರ್‌ಪೋರ್ಟ್‌ನಲ್ಲಿ ಸಿಲುಕಿಕೊಂಡ 400 ಪ್ರಯಾಣಿಕರು

IndiGo Flight

ಅಂಕಾರ: ಟರ್ಕಿ (Turkey)ಯಿಂದ ಹೊಸದಿಲ್ಲಿ, ಮುಂಬೈಗೆ ಆಗಮಿಸಬೇಕಿದ್ದ ಇಂಡಿಗೋ ವಿಮಾನ (IndiGo‍ Flight) ತಾಂತ್ರಿಕ ದೋಷದಿಂದ ಕಳೆದ 24 ಗಂಟೆಯಿಂದ ಇಸ್ತಾಂಬುಲ್‌ ಏರ್‌ಪೋರ್ಟ್‌ನಲ್ಲಿ ಬಾಕಿಯಾಗಿದ್ದು, ಸುಮಾರು 400 ಪ್ರಯಾಣಿಕರು ಸಿಕ್ಕಿಬಿದ್ದಿದ್ದಾರೆ. ವಿಮಾನ ಸಿಬ್ಬಂದಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಪ್ರಯಾಣಿಕರು ದೂರಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ. ಸೂಕ್ತ ವಸತಿ ಮತ್ತು ಆಹಾರ ವ್ಯವಸ್ಥೆ ಮಾಡಿಲ್ಲ ಎಂದೂ ಹೇಳಿದ್ದಾರೆ.

ಚಳಿಯಲ್ಲಿ ನಡುಗುತ್ತ ವಿಮಾನ ನಿಲ್ದಾಣದಲ್ಲಿಯೇ ಕೆಲವು ಗಂಟೆಗಳಿಂದ ಸಿಲುಕಿದ್ದೇವೆ. ಟರ್ಕಿಶ್ ಏರ್‌ಲೈನ್ಸ್‌ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ಇಂಡಿಗೋ ಸಂಸ್ಥೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿಲ್ಲ ಎಂದು ಹಲವರು ತಿಳಿಸಿದ್ದಾರೆ.

ಆರಂಭದಲ್ಲಿ ವಿಮಾನ ವಿಳಂಬವಾಯಿತು ಮತ್ತು ಹಾರಾಟವನ್ನು ಏಕಾಏಕಿ ರದ್ದುಗೊಳಿಸಲಾಯಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಅನುಶ್ರೀ ಬನ್ಸಾಲಿ ಎನ್ನುವ ಪ್ರಯಾಣಿಕರೊಬ್ಬರು ಈ ಬಗ್ಗೆ ಮಾಹಿತಿ ನೀಡಿ, ʼʼ2 ಬಾರಿ ವಿಮಾನದ ಹಾರಾಟ ಸಮಯವನ್ನು ಮುಂದೂಡಲಾಯಿತು. ಬಳಿಕ ರದ್ದುಗೊಳಿಸಿ 12 ಗಂಟೆಯ ಬಳಿಕ ತೆರಳುವುದಾಗಿ ತಿಳಿಸಿದರು. ಆಯಾಸ ಮತ್ತು ಜ್ವರದ ಬಗ್ಗೆ ದೂರು ನೀಡಿದಾಗಲೂ ಸೂಕ್ತವಾಗಿ ಸ್ಪಂದಿಸಿಲ್ಲ. ಇಂಡಿಗೋ ಪ್ರತಿನಿಧಿಯನ್ನು ಸಂಪರ್ಕಿಸಿದರೂ ಪ್ರಯಾಣಿಕರಿಗೆ ಯಾವುದೇ ವಸತಿ, ಊಟದ ವ್ಯವಸ್ಥೆ ಮಾಡಿಲ್ಲʼʼ ಎಂದು ಹೇಳಿದ್ದಾರೆ.

ಇಸ್ತಾಂಬುಲ್‌ನಿಂದ ಮುಂಬೈ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂಡಿಗೊ ವಿಮಾನ ಡಿ. 12ರ ರಾತ್ರಿ 8.15ಕ್ಕೆ ಹೊರಬೇಕಿತ್ತು. ಬಳಿಕ ಅದನ್ನು 11 ಗಂಟೆಗೆ ಮುಂದೂಡಲಾಯಿತು. ಬಳಿಕ ಮರುದಿನ ರಾತ್ರಿ 10 ಗಂಟೆಗೆ ನಿಗದಿಪಡಿಸಲಾಯಿತು. ಇದರಿಂದ ಅಸಮಾಧಾನಗೊಂಡ ಪ್ರಯಾಣಿಕರು ವಿಮಾನ ಸಿಬ್ಬಂದಿ ವಿರುದ್ದ ಕಿಡಿಕಾರಿದ್ದಾರೆ.

“ದೊಡ್ಡ ಸಂಖ್ಯೆಯ ಬಾಕಿಯಾದ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಲು ಲಾಂಜ್ ತುಂಬಾ ಚಿಕ್ಕದಾಗಿದೆ. ನಮ್ಮಲ್ಲಿ ಅನೇಕರು ಸರಿಯಾದ ಸೌಲಭ್ಯಗಳಿಲ್ಲದೆ ಗಂಟೆಗಟ್ಟಲೆ ನಿಂತಿದ್ದರು. ಯಾವುದೇ ಪರ್ಯಾಯ ವಿಮಾನಗಳನ್ನು ನೀಡಲಿಲ್ಲ, ಸರಿಯಾದ ಸಂವಹನವನ್ನು ಮಾಡಲಿಲ್ಲ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪರಿಹಾರಕ್ಕಾಗಿ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಹಲವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: IndiGo Flight: ವಿಮಾನ ಹಾರಿಸಲು ನಿರಾಕರಿಸಿದ ಪೈಲಟ್; ಪುಣೆ-ಬೆಂಗಳೂರು ಇಂಡಿಗೋ ಫ್ಲೈಟ್ 5 ಗಂಟೆ ವಿಳಂಬ