Wednesday, 11th December 2024

ವೈದ್ಯಕೀಯ ತುರ್ತು ಪರಿಸ್ಥಿತಿ; ವಿಮಾನ ಭೂಸ್ಪರ್ಶ, ಉಳಿಯಲಿಲ್ಲ ಪ್ರಯಾಣಿಕನ ಪ್ರಾಣ!

ನವದೆಹಲಿ: ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ಇಂಡಿಗೋ ವಿಮಾನ ವೈದ್ಯಕೀಯ ತುರ್ತು ಪರಿಸ್ಥಿತಿ ಹಿನ್ನಲೆಯಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಭೂಸ್ಪರ್ಶ ಮಾಡಿದೆ ಎಂದು ತಿಳಿದುಬಂದಿದೆ.
ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ವಿಮಾನ ನಿಲ್ದಾಣ ದಲ್ಲಿ ವೈದ್ಯಕೀಯ ಸೇವೆ ನೀಡಲಾಯಿತು.
ಆದರೆ ಅಷ್ಟು ಹೊತ್ತಿಗಾಗಲೇ ಪ್ರಯಾಣಿಕ ಸಾವನ್ನಪ್ಪಿದ್ದ ಎಂದು ವೈದ್ಯಕೀಯ ತಂಡ ಸ್ಪಷ್ಟಪಡಿಸಿದೆ. ಪ್ರಯಾಣಿಕ ನೈಜೀರಿಯಾದ ಪ್ರಜೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯಿಂದ ನಮಗೆ ಅತೀವ ದುಃಖವಾಗಿದೆ ಎಂದು ಇಂಡಿಗೋ ಏರ್ಲೈನ್ ಹೇಳಿಕೆ ಬಿಡುಗಡೆ ಮಾಡಿದೆ. ನಾವು ವಿಮಾನದ ಇತರ ಪ್ರಯಾಣಿಕರನ್ನು ಗಮ್ಯಸ್ಥಾನಕ್ಕೆ ಕರೆದೊಯ್ಯಲು ಸಂಬಂಧಪಟ್ಟ ಅಧಿಕಾರಿ ಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಹೇಳಿದೆ.