Friday, 13th December 2024

ಇಂದು ಅಯೋಧ್ಯೆಗೆ ಜಗತ್ ಪ್ರಕಾಶ್ ನಡ್ಡಾ ಭೇಟಿ

J P Nadda

ಲಕ್ನೋ: ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಬುಧವಾರ ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.

2019 ರಲ್ಲಿ ರಾಮ ಜನ್ಮಭೂಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪಿನ ಬಳಿಕ ನಡ್ಡಾ, ಅಯೋಧ್ಯೆಗೆ ಹೋಗುತ್ತಿರುವುದು ಇದೇ ಮೊದಲು. ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಆಗಮಿಸಲಿದ್ದಾರೆ.

ನಡ್ಡಾ ಮತ್ತು ಇತರ ಮುಖ್ಯಮಂತ್ರಿಗಳು ಬೆಳಿಗ್ಗೆ 11 ಗಂಟೆಗೆ ಅಯೋಧ್ಯೆಗೆ ತಲುಪುತ್ತಾರೆ. ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸದಾಗಿ ನಿರ್ಮಿಸಿದ ಕಾಶಿ ವಿಶ್ವನಾಥ ಧಾಮದ 1 ನೇ ಹಂತದ ಉದ್ಘಾ ಟನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಅವರು ಲಕ್ನೋದಲ್ಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಹನುಮಾನ್‌ಗರ್ಹಿ ದೇವಸ್ಥಾನಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ನಂತರ ರಾಮಜನ್ಮ ಭೂಮಿ ದೇವಸ್ಥಾನಕ್ಕೆ ತೆರಳಲಿದ್ದಾರೆ.

ಪ್ರಸಿದ್ಧ ಹನುಮಾನ್‌ಗರ್ಹಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ನಿರೀಕ್ಷೆಯಿದೆ. ಭಗವಾನ್ ರಾಮನ ಆಶೀರ್ವಾದ ವನ್ನು ಸಹ ಪಡೆಯಲಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭಾನುವಾರ ವಾರಾಣಸಿಗೆ ಭೇಟಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ಧಾಮದ ಮೊದಲ ಹಂತವನ್ನು ಉದ್ಘಾಟಿಸಿದ್ದರು.

ನ್ಯಾಯಾಲಯದಲ್ಲಿ ನಡೆದ ಸುದೀರ್ಘ ಹೋರಾಟದ ವಿವರ:

1949 – ವಿವಾದಿತ ಸ್ಥಳದಲ್ಲಿ ಮಸೀದಿಯ ಕೇಂದ್ರ ಗುಮ್ಮಟದೊಳಗೆ ರಾಮಲಲ್ಲಾನ ವಿಗ್ರಹಗಳ ಪ್ರತಿಷ್ಠಾಪನೆ.

1961– ವಿವಾದಿತ ಸ್ಥಳ ನಮ್ಮದು ಎಂದು ನ್ಯಾಯಾಲಯದ ಮೊರೆ ಹೋದ ಸುನ್ನಿ ವಕ್ಫ್ ಮಂಡಳಿ

1981: ಉತ್ತರ ಪ್ರದೇಶದ ಸುನ್ನಿ ಕೇಂದ್ರ ವಕ್ಫ್ ಬೋರ್ಡ್ ಸ್ಥಳದ ಸ್ವಾಧೀನ ಕೋರಿ ಅರ್ಜಿ, ಮಸೀದಿಯಿಂದ ಮೂರ್ತಿ ತೆಗೆಯುವಂತೆ ಕೋರಿ ಮನವಿ.

1986 – ವಿವಾದಗ್ರಸ್ತ ಜಾಗದಲ್ಲಿ ಹಿಂದೂಗಳ ಪೂಜೆಗೆ ಅನುವು ಮಾಡಿಕೊಡುವಂತೆ ಸ್ಥಳೀಯ ನ್ಯಾಯಾಲಯ ಆದೇಶ.

1990– ವಿವಾದಿತ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಲಾಲ್ ಕೃಷ್ಣ ಅದ್ವಾಣಿ ನೇತೃತ್ವದಲ್ಲಿ ಬಿಜೆಪಿಯಿಂದ ರಥಯಾತ್ರೆ

1992, ಡಿ.6: ಬಾಬ್ರಿ ಮಸೀದಿ ಧ್ವಂಸ.

1993: ವಿವಾದಿತ ಜಾಗವನ್ನು ಕೇಂದ್ರ ಸ್ವಾಧೀನಪಡಿಸಿಕೊಳ್ಳುವುದಕ್ಕಾಗಿ ‘ಅಯೋಧ್ಯೆ ನಿರ್ದಿಷ್ಟ ಪ್ರದೇಶದ ಸ್ವಾಧೀನ ಕಾಯಿದೆ’ ಅಂಗೀಕಾರ. ಇದಕ್ಕೆ ಇಸ್ಮಾಯಿಲ್‌ ಫಾರೂಕಿ ಸೇರಿದಂತೆ ಹಲವರಿಂದ ತಕರಾರು ಅರ್ಜಿ.

2017: ಪರಸ್ಪರ ಸಂಧಾನ ಸಮ್ಮತಿ ಮೂಲಕ ವ್ಯಾಜ್ಯ ಇತ್ಯರ್ಥ ಪಡಿಸಿಕೊಳ್ಳಲು ಸಿಜೆಐ ಜೆ.ಎಸ್‌. ಖೇಹರ್‌ ಸಲಹೆ.

2017: ಅಲಹಾಬಾದ್‌ ಹೈಕೋರ್ಟ್‌ನ 1994ರ ತೀರ್ಪಿನ ವಿರುದ್ಧ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ತ್ರಿಸದಸ್ಯ ಪೀಠ ರಚನೆ.

2018: ತನ್ನ 1994ರ ತೀರ್ಪಿನ ಮರು ಪರಿಶೀಲನೆ ಕೋರಿದ ಅರ್ಜಿಗಳ ವಿಚಾರಣೆಯನ್ನು 5 ಸದಸ್ಯರ ವಿಸ್ತೃತ ಪೀಠಕ್ಕೆ ಒಪ್ಪಿಸಲು ಕೋರಿ ರಾಜೀವ್‌ ಧವನ್‌ ಅವರಿಂದ ಅರ್ಜಿ.

2019: ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ನೇತೃತ್ವದ ಸಂಧಾನ ಸಮಿತಿಯ ಯತ್ನ ವಿಫಲ. ಈ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠದಿಂದ ನಲವತ್ತು ದಿನಗಳ ಕಾಲ ವಿಚಾರಣೆ

2019: ನವೆಂಬರ್ 9 – ಅಯೋಧ್ಯೆ ಅಂತಿಮ ತೀರ್ಪು ಪ್ರಕಟ, ವಿವಾದಿತ ಭೂಮಿ ರಾಮಲಲ್ಲಾ ಪಾಲು, ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ.