Friday, 20th September 2024

ಜೈಪುರ ಸಾಹಿತ್ಯ ಉತ್ಸವದಲ್ಲಿ ಚಿತ್ರಾ ಬ್ಯಾನರ್ಜಿ ದಿವಾಕರುಣಿ ಭಾಗಿ

-ಇನ್ಫೋಸಿಸ್ ನಾರಾಯಣ ಮೂರ್ತಿ, ಸುಧಾಮೂರ್ತಿ ದಂಪತಿ ಜೀವನಾಧಾರಿತ ಕೃತಿ ಅನಾವರಣಕ್ಕೆ ವೇದಿಕೆ ಸಜ್ಜು 
ಜಗತ್ತಿನ ಅತ್ಯುತ್ಕೃಷ್ಠವಾದ ಸಾಹಿತ್ಯ ಉತ್ಸವವೆಂದೇ ಹಿರಿಮೆ ಹೊಂದಿರುವ ಜೈಪುರ ಸಾಹಿತ್ಯ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಐದು ದಿನಗಳ ಕಾಲ ನಡೆಯಲಿರುವ ಈ ಜೈಪುರ ಸಾಹಿತ್ಯ ಉತ್ಸವ 2024 ಫೆಬ್ರವರಿ 1 ರಿಂದ 5, 2024 ರವರೆಗೆ ನಡೆಯಲಿದೆ. 17 ನೇ ಈ ಉತ್ಸವದಲ್ಲಿ ಭಾರತದವರು ಸೇರಿದಂತೆ ಜಗತ್ತಿನಾದ್ಯಂತದ 250 ಕ್ಕೂ ಹೆಚ್ಚು ಲೇಖಕರು, ಸಾಹಿತಿಗಳು, ಚಿಂತಕರು ಮತ್ತು ಉಪನ್ಯಾಸಕರು ಪಾಲ್ಗೊಳ್ಳಲಿದ್ದಾರೆ. ಈ ಉತ್ಸವವು ಜೈಪುರದ ಹೊಟೇಲ್ ಕ್ಲಾರ್ಕ್ಸ್ ಅಮರ್ ನಲ್ಲಿ ನಡೆಯಲಿದೆ.
ಈ ಖ್ಯಾತನಾಮ ಉಪನ್ಯಾಸಕರಲ್ಲಿ ಭಾರತದ ಕಾದಂಬರಿಕಾರರಾದ ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರೂ ಸಹ ಒಬ್ಬರಾಗಿದ್ದಾರೆ. ಇವರು ಖ್ಯಾತ ಸಮಾಜ ಸೇವಕಿ ಮತ್ತು ಇನ್ಫೋಸಿಸ್ ಸಂಸ್ಥಾಪಕ ದಂಪತಿಗಳಾದ ಸುಧಾಮೂರ್ತಿ ಮತ್ತು ನಾರಾಯಣಮೂರ್ತಿ ಅವರ ಜೀವನಾಧಾರಿತ ಕೃತಿಯನ್ನು ರಚಿಸಿದ್ದಾರೆ. ಈ ದಂಪತಿಗಳ ವಿವಾಹದ ಆರಂಭದ ದಿನಗಳು, ತಮ್ಮ ಸಂಬಂಧದ ನಡುವೆಯೇ ಇನ್ಫೋಸಿಸ್ ಎಂಬ ದೈತ್ಯ ಸಂಸ್ಥೆಯನ್ನು ಕಟ್ಟಿದ ಬಗೆಯನ್ನು ಚಿತ್ರಾ ಬ್ಯಾನರ್ಜಿ ಅತ್ಯಂತ ಸುಂದರವಾಗಿ ಬರೆದಿದ್ದಾರೆ. ನಾರಾಯಣಮೂರ್ತಿ ಅವರ ಬಗ್ಗೆ ಹೊರಬಂದಿರುವ ಏಕೈಕ ಕೃತಿ ಇದಾಗಿದ್ದು, ಇದರಲ್ಲಿ ಮೂರ್ತಿ ಅವರೊಂದಿಗೆ ನಡೆಸಿದ ಆಳವಾದ ಸಂದರ್ಶನ ಸೇರಿದಂತೆ ಇನ್ನಿತರ ಅಂಶಗಳು ಒಳಗೊಂಡಿವೆ.
ಈ ಕೃತಿ ಈಗಾಗಲೇ ಇಂದ್ರಾ ನೂಯಿ (`ಅದ್ಭುತ… ವ್ಯವಹಾರ ಭಾಗದ ಕೃತಿ, ಪ್ರಣದ ಕುರಿತಾದ ಕಾದಂಬರಿ’) ಮುಕೇಶ್ ಅಂಬಾನಿ (`ಅತ್ಯಂತ ಸುಂದರ’), ಟ್ವಿಂಕಲ್ ಖನ್ನಾ (`ಅತ್ಯುತ್ತಮ ವಿವರಣೆಯ ಕೃತಿ’) ಮತ್ತು ಸಚಿನ್ ತೆಂಡೂಲ್ಕರ್ (`ಪ್ರೇರಣಾದಾಯಕ ಕೃತಿ’) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚಿತ್ರಾ ದಿವಾಕರುಣಿ ಅವರು ಈ ಬಗ್ಗೆ ಮಾತನಾಡಿ, “ಈ ಕಾದಂಬರಿಯು ನನಗೆ ಒಂದು ಅತ್ಯದ್ಭುತವಾದ ಅನುಭವವನ್ನು ನೀಡಿದೆ. ಮೂರ್ತಿ ಕುಟುಂಬ ದೊಂದಿಗೆ ಒಂದು ಅತ್ಯುತ್ತಮ ಮತ್ತು ಅವಿಸ್ಮರಣೀಯ ಸಮಯವನ್ನು ಕಳೆದಿದ್ದು ನನಗೆ ಹೆಮ್ಮೆ ಎನಿಸಿದೆ. ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಅವರು ಇದುವರೆಗೆ ಎಲ್ಲಿಯೂ ಹಂಚಿಕೊಳ್ಳದಿರುವ ಬಾಲ್ಯ ಮತ್ತು ಯೌವ್ವನದ ಜೀವನದ ಕ್ಷಣಗಳನ್ನು ಈ ಕೃತಿಯಲ್ಲಿ ಹೇಳಿಕೊಂಡಿದ್ದಾರೆ. ಜೀವನದಲ್ಲಿ ಅವರು ವಹಿಸಿದ ಮಹತ್ವದ ಪಾತ್ರಗಳು, ಗಳಿಸಿದ ಯಶಸ್ಸು ಮತ್ತು ಸಮಾಜಸೇವೆಗೆ ಪ್ರೇರಣೆ ತುಂಬಿದ ಸ್ಫೂರ್ತಿದಾಯಕ, ಆಶ್ಚರ್ಯಕರ ಮತ್ತು ಅವಿಸ್ಮರಣೀಯ ಕ್ಷಣಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಈ ಕೃತಿಯು ಹೆಚ್ಚು ಹೆಚ್ಚು ಓದುಗರನ್ನು ಆಕರ್ಷಿಸುತ್ತದೆ ಎಂಬುದರ ಬಗ್ಗೆ ನನಗೆ ನಂಬಿಕೆ ಇದೆ’’ ಎಂದು ಹೇಳಿದ್ದಾರೆ.