Saturday, 14th December 2024

ಉ.ಪ್ರ ಚುನಾವಣೆ: ಬಿಜೆಪಿಯ ‘ಜನ ವಿಶ್ವಾಸ ಯಾತ್ರೆ’ ಇಂದಿನಿಂದ

#UttaraPradesh

ಲಕ್ನೋ: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆಡಳಿತ ಪಕ್ಷ ಬಿಜೆಪಿ ಚುನಾವಣಾ ಪ್ರಚಾರ ಆರಂಭಿಸಿದೆ.

ಬಿಜೆಪಿ ಭಾನುವಾರ ‘ಜನ ವಿಶ್ವಾಸ ಯಾತ್ರೆ’ ಆರಂಭಿಸಲಿದೆ. ರಾಜ್ಯದಲ್ಲಿ ಡಿ.19 ರಿಂದ ‘ಜನ ವಿಶ್ವಾಸ ಯಾತ್ರೆ’ ಹೆಸರಿನಲ್ಲಿ ಬಿಜೆಪಿ ಆರು ಯಾತ್ರೆಗಳನ್ನು ಆರಂಭಿಸಲಿದ್ದು, ಈ ಯಾತ್ರೆ ಬಿಜ್ನೋರ್, ಮಥುರಾ, ಝಾನ್ಸಿ, ಗಾಜಿಪುರ, ಅಂಬೇಡ್ಕರ್ ನಗರ ಮತ್ತು ಬಲ್ಲಿಯಾದಿಂದ ಆರಂಭವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ.

2017ರ ವಿಧಾನಸಭಾ ಚುನಾವಣೆಗೂ ಮುನ್ನ ‘ನಾ ಗೂಂಡಾರಾಜ್, ನಾ ಭ್ರಷ್ಟಾಚಾರ್-ಅಬ್ಕಿ ಬಾರ್ ಬಿಜೆಪಿ ಸರ್ಕಾರ್’ ಎಂಬ ಘೋಷಣೆಯೊಂದಿಗೆ ಯಾತ್ರೆ ಕೈಗೊಂಡು, ಜನರ ಆಶೀರ್ವಾದ ಸಿಕ್ಕು ಸರ್ಕಾರ ರಚನೆ ಮಾಡಿದೆವು. ಇಂದು ಗೂಂಡಾಗಳೆಲ್ಲ ಹೆದರಿ ಮೂಲೆಗುಂಪಾಗಿದ್ದಾರೆ. ಇದೀಗ ಸಂಘಟನೆ ಮತ್ತು ಸರ್ಕಾರ ಯೋಜನೆಗಳನ್ನು ಸಾರ್ವಜನಿಕರಿಗಾಗಿ ಮಾಡಲಾಗುತ್ತಿದೆ. 2022ರಲ್ಲಿ ಮತ್ತೊಮ್ಮೆ ಸಂಪೂರ್ಣ ಬಹುಮತದ ಸರ್ಕಾರ ರಚನೆಯಾಗಲಿದೆ ಎಂದು ಸಿಂಗ್ ಹೇಳಿದ್ದಾರೆ.

ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಲೋಹಿಯಾ ಅವರು ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಮಥುರಾ ಜಿಲ್ಲೆಯಿಂದ ರಾಜ್ಯದ ಸಿಎಂ ಯೋಗಿ ಆದಿತ್ಯನಾಥ್ ಯಾತ್ರೆ ಹೊರಡಲಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಝಾನ್ಸಿಯಿಂದ ‘ಜನ್ ವಿಶ್ವಾಸ್ ಯಾತ್ರೆ’ ಹೊರಡಲಿದ್ದು, ಲಲಿತ್‌ಪುರ, ಮಹೋಬಾ, ಬಂದಾ, ಚಿತ್ರಕೂಟ, ಫತೇಪುರ್, ಹಮೀರ್‌ಪುರ್, ಜಲೌನ್, ಔರೈಯಾ, ಇಟಾವಾ, ಫರೂಕಾಬಾದ್, ಕಾನ್ಪುರ್ ದೇಹತ್ ಮೂಲಕ ಕಾನ್ಪುರದಲ್ಲಿ ಕೊನೆಗೊಳ್ಳಲಿದೆ.