Saturday, 14th December 2024

Jani Master: ರಾಷ್ಟ್ರ ಪ್ರಶಸ್ತಿ ವಿಜೇತ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಅರೆಸ್ಟ್‌

Jani Master

ಬೆಂಗಳೂರು: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ, ಸುದೀಪ್‌ (Sudeepa) ಅಭಿನಯದ ‘ವಿಕ್ರಾಂತ್‌ ರೋಣ’ ಸಿನಿಮಾದ ‘ರಾ…ರಾ…ರಕ್ಕಮ್ಮ’ ಹಾಡಿನ ಮೂಲಕ ಜನಪ್ರಿಯರಾದ ನೃತ್ಯ ಸಂಯೋಜಕ (Choreographer) ಜಾನಿ ಮಾಸ್ಟರ್‌ (Jani Master) ಬೆಂಗಳೂರಿನಲ್ಲಿ ಅರೆಸ್ಟ್‌ ಆಗಿದ್ದಾರೆ. ಅವರ ವಿರುದ್ಧ ಹೈದರಾಬಾದ್‌ನ ರಾಯದುರ್ಗಂ ಪೊಲೀಸ್‌ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಾಗಿತ್ತು.

ನೃತ್ಯ ಸಂಯೋಜಕಿಯಾಗಿರುವ 21 ವರ್ಷದ ಯುವತಿ ದೂರು ನೀಡಿದ್ದು, ಜಾನಿ ಮಾಸ್ಟರ್‌ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಎಸಗಿರುವುದಾಗಿ ದೂರು ನೀಡಿದ್ದಾರೆ. ಹೊರಾಂಗಣ ಚಿತ್ರೀಕರಣದ ವೇಳೆ ತನ್ನ ಮೇಲೆ ಹಲ್ಲೆ ನಡೆಸಿ ಲೈಂಗಿಕವಾಗಿ ಕಿರುಕುಳ ನೀಡಿರುವುದಾಗಿ ಜಾನಿ ಮಾಸ್ಟರ್‌ ಆಲಿಯಾಸ್‌ ಶೇಕ್‌ ಜಾನಿ ಬಾಷಾ ವಿರುದ್ಧ ಅವರು ದೂರಿದ್ದಾರೆ.

ಪೋಕ್ಸೋ ಕೇಸ್‌ ದಾಖಲು

ಜಾನಿ ಮಾಸ್ಟರ್‌ ವಿರುದ್ಧ ಪೋಕ್ಸೋ ಕೇಸ್‌ ದಾಖಲಿಸಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಯುವತಿ ಅಪ್ರಾಪ್ತೆಯಾಗಿದ್ದಳು, ಹೀಗಾಗಿ ಜಾನಿ ಮಾಸ್ಟರ್‌ ವಿರುದ್ಧ ಪೋಕ್ಸೋ ಕೇಸ್‌ ದಾಖಲಿಸಲಾಗಿದೆ. ಚೆನ್ನೈ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ ನಡೆದ ಚಿತ್ರೀಕರಣದ ವೇಳೆ ಜಾನಿ ತನ್ನ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ನರಸಿಂಗಿಯಲ್ಲಿರುವ ತನ್ನ ನಿವಾಸದಲ್ಲಿಯೂ ಹಲವು ಬಾರಿ ಹಲ್ಲೆ ನಡೆದಿದೆ ಎಂದಿದ್ದಾರೆ. ಸಂತ್ರಸ್ತೆ ನರಸಿಂಗಿ ನಿವಾಸಿಯಾಗಿರುವುದರಿಂದ, ಪ್ರಕರಣವನ್ನು ಅಲ್ಲಿನ ಪೊಲೀಸರಿಗೆ ವರ್ಗಾಯಿಸಲಾಗಿದೆ ಮತ್ತು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗುವುದು” ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಾನಿ ಮಾಸ್ಟರ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 376 (ಅತ್ಯಾಚಾರ), ಸೆಕ್ಷನ್‌ 506 (ಕ್ರಿಮಿನಲ್‌ ಬೆದರಿಕೆ) ಮತ್ತು ಸೆಕ್ಷನ್‌ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹಿಂದೆಯೂ ದೂರು ದಾಖಲಾಗಿತ್ತು

ಜಾನಿ ಮಾಸ್ಟರ್‌ ವಿರುದ್ಧ ದೂರು ದಾಖಲಾಗುತ್ತಿರುವುದು ಇದು ಮೊದಲ ಸಲವೇನಲ್ಲ. ಈ ವರ್ಷದ ಜೂನ್‌ನಲ್ಲಿ ಡ್ಯಾನ್ಸರ್‌ ಸತೀಶ್‌ ಎನ್ನುವವರು ಜಾನಿ ಮಾಸ್ಟರ್‌ ವಿರುದ್ಧ ಠಾಣೆ ಮೆಟ್ಟಿಲೇರಿದ್ದರು. ಕೆಲಸ ಸಿಗದಂತೆ ಜಾನಿ ಮಾಸ್ಟರ್‌ ತಡೆಯುತ್ತಿದ್ದಾರೆ ಎಂದು ಸತೀಶ್‌ ಆರೋಪಿಸಿದ್ದರು. ಅಲ್ಲದೆ 2015ರಲ್ಲಿ ಕಾಲೇಜೊಂದರಲ್ಲಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಜಾನಿ ಮಾಸ್ಟರ್‌ಗೆ ಹೈದರಾಬಾದ್‌ನ ಮೆಡ್ಚಲ್‌ನ ಸ್ಥಳೀಯ ನ್ಯಾಯಾಲಯವು 2019ರಲ್ಲಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.

ರಾಷ್ಟ್ರ ಪ್ರಶಸ್ತಿ ವಿಜೇತ

2009ರಲ್ಲಿ ತೆರೆಕಂಡ ʼದ್ರೋಣʼ ತೆಲುಗು ಸಿನಿಮಾಕ್ಕೆ ನೃತ್ಯ ಸಂಯೋಜಿಸುವ ಮೂಲಕ ಜಾನಿ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಹಿಂದಿ, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. 2022ರಲ್ಲಿ ತೆರೆಕಂಡ ಸುದೀಪ್‌ ಅಭಿನಯದ ಪ್ಯಾನ್‌ ಇಂಡಿಯಾ ಚಿತ್ರ ʼವಿಕ್ರಾಂತ್‌ ರೋಣʼದ ʼರಾ…ರಾ… ರಕ್ಕಮ್ಮʼ ಹಾಡು ಬಹು ಜನಪ್ರಿಯವಾಗಿದೆ. ಬಾಲಿವುಡ್‌ ಬೆಡಗಿ ಜಾಕ್ವಲಿನ್‌ ಫರ್ನಾಂಡೀಸ್‌ ಹೆಜ್ಜೆ ಹಾಕಿದ್ದ ಈ ಹಾಡು ಚಿತ್ರಪ್ರೇಮಿಗಳ ಗಮನ ಸೆಳೆದಿದೆ. ಅದೇ ವರ್ಷ ತೆರೆಕಂಡ ತಮಿಳಿನ ʼತಿರುಚಿತ್ರಾಂಬಲನ್‌ʼ ಸಿನಿಮಾದ ʼಮೇಘಂ ಕರುಕ್ಕಾತʼ ಹಾಡಿಗಾಗಿ ಇತ್ತೀಚೆಗೆ ಜಾನಿ ಮಾಸ್ಟರ್‌ಗೆ ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿತ್ತು.

ಈ ಸುದ್ದಿಯನ್ನೂ ಓದಿ: Jani Master: ಲೈಂಗಿಕ ಕಿರುಕುಳ ಆರೋಪ; ʼರಾ ರಾ ರಕ್ಕಮ್ಮʼ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ ದೂರು ದಾಖಲು