Saturday, 5th October 2024

ಹಿರಿಯ ನಾಯಕ ಜಸ್ವಂತ್ ಸಿಂಗ್ ವಿಧಿವಶ

ನವದೆಹಲಿ: ಮಾಜಿ ಕೇಂದ್ರ ಸಚಿವ, ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಭಾನುವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ, ಸಂಸದ ಅಶೋಕ್ ಗಸ್ತಿಯನ್ನು ಕಳೆದುಕೊಂಡಿದ್ದ ಬಿಜೆಪಿಗೆ ಈಗ ಹಿರಿಯ ನಾಯಕನನ್ನು ಕಳೆದುಕೊಂಡಿರುವುದು ಇನ್ನಷ್ಟು ಆಘಾತವನ್ನುಂಟು ಮಾಡಿದೆ.

ಜಸ್ವಂತ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, ಜಸ್ವಂತ್ ಸಿಂಗ್ ರಾಷ್ಟ್ರಕ್ಕಾಗಿ ಸಲ್ಲಿಸಿದ ಸೇವೆ ಅಪಾರ. ಓರ್ವ ಯೋಧನಾಗಿ, ಬಳಿಕ ರಾಜಕೀಯದ ಮೂಲಕ ಸೇವೆ ಸಲ್ಲಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ಅವಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಹಣಕಾಸು ಖಾತೆ, ರಕ್ಷಣಾ ಖಾತೆ, ವಿದೇಶಾಂಗ ಖಾತೆಗಳನ್ನು ನಿಭಾಯಿಸಿದ್ದರು. ಜಸ್ವಂತ್ ಅಗಲಿಕೆ ತೀವ್ರ ನೋವುಂಟು ಮಾಡಿದೆ. ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿ, ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಶ್ರೀ ಜಸ್ವಂತ್ ಸಿಂಗ್ ಜಿ ಅವರ ನಿಧನ ದಿಂದ ತೀವ್ರ ನೋವಾಗಿದೆ. ರಕ್ಷಣಾ ಮಂತ್ರಿ ಉಸ್ತುವಾರಿ ಸೇರಿದಂತೆ ಹಲವಾರು ಹುದ್ದೆಗಳಲ್ಲಿ ಅವರು ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದರು. ಜಸ್ವಂತ್ ಅವರು ಪರಿಣಾಮಕಾರಿ ಸಚಿವರು ಮತ್ತು ಸಂಸದರು ಎಂದು ಗುರ್ತಿಸಿಕೊಂಡ ನಾಯಕರಾಗಿದ್ದರು ಎಂದಿದ್ದಾರೆ.

ರಾಜಸ್ಥಾನದ ಜೋಧ್ ಪುರ ಮೂಲದ ಜಸ್ವಂತ್ ಸಿಂಗ್, ಆರಂಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ರಾಜಕೀಯ ಆಕಾಂಕ್ಷೆಯಿಂದ ಸೇನೆಗೆ ನಿವೃತ್ತಿ ಘೋಷಿಸಿ ಸಕ್ರಿಯ ರಾಜಕೀಯಕ್ಕೆ ಸೇರ್ಪಡೆಯಾಗಿದ್ದರು. ಅವರು ಬಿಜೆಪಿ ಪಕ್ಷದಿಂದ ಐದು ಬಾರಿ ರಾಜ್ಯ ಸಭೆಗೆ ಆಯ್ಕೆಯಾಗಿದ್ದರು. ( 1980, 1986, 1998, 1999, 2004) ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. (1990, 1991,1996, 2009). ಕೇಂದ್ರ ಹಣಕಾಸು, ವಿದೇಶಾಂಗ, ಮತ್ತು ರಕ್ಷಣಾ ಖಾತೆಗಳಂತಹ ಪ್ರಮುಖ ಖಾತೆಗಳನ್ನು ಜಸ್ವಂತ್ ಸಿಂಗ್ ನಿಭಾಯಿಸಿದ್ದರು.