Monday, 9th December 2024

Jharkhand Polls: ಜಾರ್ಖಂಡ್‌ ವಿಧಾನಸಭಾ ಚುನಾವಣೆ; ಶೇ. 64.86ರಷ್ಟು ಮತದಾನ

Jharkhand Polls

ರಾಂಚಿ: ಜಾರ್ಖಂಡ್‌ ವಿಧಾನಸಭಾ ಚುನಾವಣೆ (Jharkhand Polls)ಯ ಮೊದಲ ಹಂತದ ಮತದಾನ ಬುಧವಾರ (ನ. 13) ಮುಕ್ತಾಯವಾಗಿದ್ದು, 5 ಗಂಟೆ ವೇಳೆಗೆ ಶೇ. 64.86 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ (Election Commission of India) ತಿಳಿಸಿದೆ. ಕಳೆದ ಬಾರಿ ಅಂದರೆ 2019ರ ವಿಧಾನಸಭಾ ಚುನಾವಣೆಯ ವೇಳೆ ಶೇ. 63.9ರಷ್ಟು ಮತದಾನವಾಗಿತ್ತು. ಈ ದಾಖಲೆಯನ್ನು ಇದು ಮುರಿದಿದ್ದು, ನಕ್ಸಲ್‌ ಪೀಡಿತ ಪ್ರದೇಶದಲ್ಲಿಯೂ ಉತ್ತಮ ಸ್ಪಂದನೆ ದೊರೆತಿದೆ.

ಜಾರ್ಖಂಡ್‌ ವಿಧಾನಸಭಾ ಚುನಾವಣೆಯ ಜತೆಗೆ ಇಂದು ಕರ್ನಾಟಕ ಸೇರಿದಂತೆ 15 ರಾಜ್ಯಗಳ 23 ಕ್ಷೇತ್ರಗಳಲ್ಲಿಯೂ ಉಪಚುನಾವಣೆ ನಡೆದಿದೆ. ಸಿಕ್ಕಿಂನ 2 ವಿಧಾನಸಭಾ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಇನ್ನು ಕೇರಳದ ವಯನಾಡು ಸೇರಿದಂತೆ 2 ಲೋಕಸಭಾ ಕ್ಷೇತ್ರಗಳಲ್ಲಿಯೂ ಉಪಚುನಾವಣೆ ನೆರವೇರಿದೆ. ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಕೇರಳದ ವಯನಾಡು ಕ್ಷೇತ್ರಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ರಾಜೀನಾಮೆ ನೀಡಿದ್ದು, ಇಲ್ಲಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ವಯನಾಡು ಕ್ಷೇತ್ರದ ಇಡೀ ದೇಶದ ಗಮನ ಸೆಳೆದಿದೆ.

ಶಾಂತಿಯುತ ಮತದಾನ

ಜಾರ್ಖಂಡ್‌ನಲ್ಲಿ ಈ ಮೊದಲ ಹಂತದ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ʼʼಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಯಿತು. ಎಲ್ಲೂ ಹಿಂಸಾಚಾರ ನಡೆದಿಲ್ಲ. ಸಂಜೆ 5 ಗಂಟೆ ವೇಳೆಗೆ ದಾಖಲೆಯ ಶೇ. 64.86ರಷ್ಟು ಮತದಾನವಾಗಿದೆ. 2019ರ ಚುನಾವಣೆಯಲ್ಲಿ ಶೇ. 63.9 ಮತದಾನವಾಗಿತ್ತುʼʼ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮತದಾನ ಮುಕ್ತಾಯವಾಗುವ ವೇಳೆ ಹಲವು ಕೇಂದ್ರಗಳಲ್ಲಿ ಉದ್ದನೆಯ ಸಾಲು ಕಂಡು ಬಂದಿತ್ತು. ಮತದಾರರು ಈ ಬಾರಿ ಉತ್ಸಾಹದಿಂದ ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದು ಜಾರ್ಖಂಡ್‌ನ 43 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಲೋಹರ್ಡಗಾದಲ್ಲಿ ಅತಿ ಹೆಚ್ಚು ಅಂದರೆ ಶೇ. 73.21ರಷ್ಟು ಮತ್ತು ಹಜಾರಿಬಾಗ್‌ನಲ್ಲಿ ಅತಿ ಕಡಿಮೆ ಅಂದರೆ ಶೇ. 59.13ರಷ್ಟು ಮತದಾನವಾಗಿದೆ.

ʼʼಬೆದರಿಕೆ ಮತ್ತು ಬಹಿಷ್ಕಾರಕ್ಕೆ ಸೊಪ್ಪು ಹಾಕದ 15 ಜಿಲ್ಲೆಗಳ ಮತದಾರರು ತಮ್ಮ ಹಕ್ಕು ಚಲಾಯಿಸಲು ಮಗಗಟ್ಟೆಗಳಿಗೆ ಬೆಳಗ್ಗಿಯೆಂದಲೇ ಆಗಮಿಸಿದ್ದರು. ವೃದ್ಧರು, ಮಹಿಳೆಯರು, ವಿಶೇಷ ಚೇತನರು ಮತ್ತು ಬುಡಕಟ್ಟು ಜನಾಂಗದವರು ಸೇರಿದಂತೆ ಎಲ್ಲ ವರ್ಗದ ಮತದಾರರು ಉತ್ಸಾಹದಿಂದ ಪಾಲ್ಗೊಂಡಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿತ್ತುʼʼ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಜಾರ್ಖಂಡ್‌ನಲ್ಲಿ 2ನೇ ಮತ್ತು ಕೊನೆಯ ಹಂತದ ಮತದಾನವು ನ. 20ರಂದು ನಡೆಯಲಿದ್ದು, ನ. 23ರಂದು ಫಲಿತಾಂಶ ಪ್ರಕಟವಾಗಲಿದೆ.

ರಾಜ್ಯದ 3 ಕ್ಷೇತ್ರಗಳಲ್ಲಿ ಶೇ. 81.84 ಮತದಾನ

ಬೆಂಗಳೂರು: ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳಲ್ಲಿ ಬುಧವಾರ ಶಾಂತಿಯುತವಾಗಿ ಮತದಾನ ನಡೆದಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗಳತ್ತ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಸಂಜೆ 6 ಗಂಟೆ ವೇಳೆಗೆ ಮೂರು ಕ್ಷೇತ್ರಗಳಲ್ಲಿ ಒಟ್ಟು ಶೇ. ಶೇ. 81.84 ಮತದಾನ ಆಗಿದ್ದು, ಈ ಪೈಕಿ ಚನ್ನಪಟ್ಟಣ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ. 88.80 ಮತದಾನ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ: Rahul Gandhi: ಚುನಾವಣಾ ಪ್ರಚಾರ ಮುಗಿಸಿ ಜಿಪ್‌ಲೈನ್‌ ಸಾಹಸಲ್ಲಿ ಭಾಗಿಯಾದ ರಾಹುಲ್‌ ಗಾಂಧಿ; ವೈರಲ್‌ ವಿಡಿಯೊ ಇಲ್ಲಿದೆ