Wednesday, 11th December 2024

JioPhone Prima 2: ಜಿಯೊದಿಂದ ಹಳೇ ಮಾಡೆಲ್‌ನಲ್ಲೇ ಸ್ಮಾರ್ಟ್‌ ಫೋನ್‌! ದರ ಕೇವಲ 2799 ರೂ!

Jiophone Prima 2

ಬೆಂಗಳೂರು: ವಿಶೇಷ ವಿನ್ಯಾಸ ಮತ್ತು ನವೀನ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಹೊಚ್ಚ ಹೊಸದಾದ “ಜಿಯೋಫೋನ್ ಪ್ರೈಮಾ 2” (JioPhone Prima 2) ಹೆಸರಿನ ಸ್ಮಾರ್ಟ್ ಫೀಚರ್ ಫೋನ್ ಅನ್ನು ಜಿಯೋ (Jio) ಬಿಡುಗಡೆಗೊಳಿಸಿದೆ. ಕರ್ವ್ ಇರುವ ವಿನ್ಯಾಸದೊಂದಿಗೆ ಆಕರ್ಷಕವಾಗಿರುವ ಈ ಫೋನ್, ಪ್ರೀಮಿಯಂ ಮೊಬೈಲ್ ಅನುಭವವನ್ನು ನೀಡುತ್ತದೆ. ಐಷಾರಾಮಿ ಲೆದರ್ ಫಿನಿಶಿಂಗ್ ಹೊಂದಿದ್ದು, ಕೈಯಿಂದ ಜಾರಿ ಬೀಳದಂತೆ ಭದ್ರವಾಗಿ ಹಿಡಿದುಕೊಳ್ಳಲು ಅನುಕೂಲ. ಜಿಯೋ ಆ್ಯಪ್‌ಗಳ (Jio Apps) ಜತೆಗೆ ಯೂಟ್ಯೂಬ್, ಫೇಸ್‌ಬುಕ್, ಗೂಗಲ್ ವಾಯ್ಸ್ ಅಸಿಸ್ಟೆಂಟ್ ಮತ್ತು ಇತರ ಜನಪ್ರಿಯ ಆ್ಯಪ್‌ಗಳನ್ನೂ ಈ ಸ್ಮಾರ್ಟ್ ಫೀಚರ್ ಫೋನ್ ಬೆಂಬಲಿಸುತ್ತದೆ.

ಆಧುನಿಕ ಜೀವನಶೈಲಿಗೆ ತಕ್ಕಂತೆ ಅಗ್ಗದ ದರದಲ್ಲಿ ದೊರೆಯುವ ಜಿಯೋಫೋನ್ ಪ್ರೈಮಾ 2ರಲ್ಲಿ, ಸಾಂಪ್ರದಾಯಿಕ ವೈಶಿಷ್ಟ್ಯಗಳ ಫೋನ್‌ನ ಗಡಿಯನ್ನೂ ಮೀರಿ, ಪ್ರತ್ಯೇಕ ಆ್ಯಪ್ ಅವಶ್ಯಕತೆಯಿಲ್ಲದೆಯೇ ವೀಡಿಯೊ ಕರೆಗೆ ಅವಕಾಶವಿದ್ದು, ಪ್ರೀತಿ ಪಾತ್ರರೊಂದಿಗೆ ಸದಾ ಸಂಪರ್ಕದಲ್ಲಿರಲು ಅನುಕೂಲ ಕಲ್ಪಿಸುತ್ತದೆ.

ಜಿಯೋಫೋನ್ ಪ್ರೈಮಾ 2 ವಿಶೇಷತೆ ಏನೇನು?

ಜಿಯೋ ಆ್ಯಪ್‌ಗಳಾದ ಜಿಯೋಟಿವಿ, ಜಿಯೋಸಾವನ್, ಜಿಯೋನ್ಯೂಸ್, ಜಿಯೋಸಿನಿಮಾ ಮುಂತಾದವುಗಳ ಬಳಕೆಯ ಜತೆಗೆ ಜಿಯೋಪೇ ಆ್ಯಪ್ ಮೂಲಕ ಯುಪಿಐ ಪಾವತಿಗೆ ಜಿಯೋಫೋನ್ ಪ್ರೈಮಾ 2 4ಜಿ ಫೋನ್ ಅವಕಾಶ ಒದಗಿಸುತ್ತದೆ. ಜತೆಗೆ, ಜಿಯೋಚಾಟ್ ಮೂಲಕ ಗ್ರೂಪ್ ಚಾಟ್, ಧ್ವನಿ ಸಂದೇಶಗಳು, ಫೋಟೊ ಮತ್ತು ವಿಡಿಯೊ ಹಂಚಿಕೆ ಮುಂತಾದ ಸೌಲಭ್ಯಗಳು ಇದರಲ್ಲಿವೆ. ಜಿಯೋಫೋನ್ ಪ್ರೈಮಾ 2 ರಲ್ಲಿ ಜಿಯೋಸ್ಟೋರ್ ಇದ್ದು, ಅದರಿಂದ ಬಳಕೆದಾರರು ತಮಗೆ ಅಗತ್ಯವಿರುವ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಅಳವಡಿಸಿಕೊಳ್ಳಬಹುದಾಗಿದೆ.

ಈ ಸುದ್ದಿಯನ್ನೂ ಓದಿ | Star Ramp Walk: 24 ಕ್ಯಾರೆಟ್‌ ಗೋಲ್ಡ್ ವಿನ್ಯಾಸದ ಮಣಿಪುರಿ ಉಡುಗೆಯಲ್ಲಿ ಊರ್ವಶಿ ರೌಟಾಲಾ ರ‍್ಯಾಂಪ್‌ ವಾಕ್‌

ಸ್ಪರ್ಶ-ಗ್ರಾಹ್ಯವಾದ ಕೀಪ್ಯಾಡ್ ಇದ್ದು, ಸುಗಮವಾದ ಬಳಕೆಗೆ ಮೃದುವಾದ ಪುಷ್ ಬಟನ್‌ಗಳಿವೆ. ಜತೆಗೆ, ಮೈಕ್ರೋಫೋನ್ ಚಿಹ್ನೆ ಇರುವ ದೊಡ್ಡದಾದ ನ್ಯಾವಿಗೇಶನ್ ಕೀ ಮೂಲಕ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಅನ್ನು ಸುಲಭವಾಗಿ ಮತ್ತು ನೇರವಾಗಿ ಬಳಸಬಹುದಾಗಿದೆ.

ಜಿಯೋಫೋನ್ ಪ್ರೈಮಾ 2 4ಜಿ ಫೋನ್ ಕಾಯ್ ಒಎಸ್ (KaiOS) ಮೂಲಕ ಕಾರ್ಯಾಚರಿಸುತ್ತದೆ. ಇದರಲ್ಲಿ ಕ್ವಾಲ್‌ಕಂ ಪ್ರೊಸೆಸರ್ ಇದ್ದು, 512ಎಂಬಿ RAM ಮತ್ತು ನಮಗೆ ಬೇಕಾದ ಅಪ್ಲಿಕೇಶನ್‌ಗಳನ್ನು ಅಳವಡಿಸಿಕೊಳ್ಳಲು 4GB ಆಂತರಿಕ ಮೆಮೊರಿ ಇದೆ. 128 ಜಿಬಿ ವರೆಗಿನ ಸಾಮರ್ಥ್ಯದ ಬಾಹ್ಯ ಎಸ್‌ಡಿ ಕಾರ್ಡ್‌ಗಳ ಮೂಲಕ ನಮಗೆ ಬೇಕಾದ ಫೈಲ್, ಹಾಡು, ವಿಡಿಯೊಗಳನ್ನು ಸೇವ್ ಮಾಡಿಕೊಳ್ಳಬಹುದಾಗಿದೆ.

ಕ್ಯಾಮೆರಾ ವಿಶೇಷತೆ

2.4 ಇಂಚಿನ ಎಲ್‌ಸಿಡಿ ಸ್ಕ್ರೀನ್, 2000mAh ಬ್ಯಾಟರಿ ಹೊಂದಿರುವ ಜಿಯೋಫೋನ್ ಪ್ರೈಮಾ 2 4ಜಿ ಫೋನ್, ಆನಂದಮಯ ಕ್ಷಣಗಳನ್ನು ಫೋಟೋ, ವಿಡಿಯೊಗಳಲ್ಲಿ ಸೆರೆ ಹಿಡಿದಿಟ್ಟುಕೊಳ್ಳಲು ಡಿಜಿಟಲ್ ಸೆಲ್ಫಿ ಕ್ಯಾಮೆರಾ ಹಾಗೂ ಹಿಂಭಾಗದಲ್ಲಿ ಪ್ರಧಾನ ಕ್ಯಾಮೆರಾ ಲೆನ್ಸ್ ಹೊಂದಿದೆ. ಹಾಡುಗಳನ್ನು ಆಲಿಸಲು 3.5 ಮಿಮೀ ಹೆಡ್‌ಫೋನ್ ಜ್ಯಾಕ್ ಇದ್ದು, ಬ್ಲೂಟೂತ್ 5.0 ಹಾಗೂ ವೈಫೈ ಸಂಪರ್ಕವನ್ನು ಬೆಂಬಲಿಸುತ್ತದೆ. ಇಂಗ್ಲಿಷ್ ಮತ್ತು ಭಾರತದ 22 ಭಾಷೆಗಳನ್ನು ಈ ಫೋನ್ ಬೆಂಬಲಿಸುತ್ತದೆ.

ಬೆಲೆ ಎಷ್ಟು?

ಜಿಯೋಫೋನ್ ಪ್ರೈಮಾ 2 ಬೆಲೆ ₹2799 ಆಗಿದೆ. ಫೀಚರ್ ಫೋನ್ ವಿಭಾಗದಲ್ಲಿ ಫ್ಲ್ಯಾಗ್‌ಶಿಪ್ ಉತ್ಪನ್ನ ಎಂಬಂತಿರುವ ಜಿಯೋಫೋನ್ ಪ್ರೈಮಾ 2, ಫೀಚರ್ ಫೋನ್‌ನ ಸರಳತೆ ಮತ್ತು ಆಧುನಿಕತೆಯ ಸಮ್ಮಿಲನವಾಗಿದೆ.

ಈ ಸುದ್ದಿಯನ್ನೂ ಓದಿ | Designer Velvet Gown Fashion: ಸೆಲೆಬ್ರಿಟಿ ಲುಕ್‌‌‌ಗೆ ಸಾಥ್‌ ನೀಡುವ ವೆಲ್ವೆಟ್‌ ಡಿಸೈನರ್‌ ಗೌನ್‌

ಜಿಯೋಫೋನ್ 2 ಪ್ರೈಮಾ ಇದೊಂದು ಕೇವಲ ಫೋನ್ ಅಲ್ಲ, ಬದಲಾಗಿ ಚಂದದ ನೋಟ ಮತ್ತು ನಾವೀನ್ಯತೆಯ ಸಂಗಮವಾಗಿರುವ ಹಾಗೂ ಫೀಚರ್ ಫೋನ್‌ಗಳ ಭವಿಷ್ಯದಂತಿರುವ ಈ ಫೋನ್ ಮೂಲಕ ಜೀವನಶೈಲಿಯನ್ನೇ ಉನ್ನತೀಕರಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.