Sunday, 6th October 2024

ಜನರು ಹಸಿವಿನಿಂದ ಸಾಯುತ್ತಿರುವಾಗ, ಹೊಸ ಸಂಸತ್‌ ಕಟ್ಟಡದ ಅವಶ್ಯಕತೆಯಿದೆಯೇ?

ಚೆನ್ನೈ: ದೇಶದಲ್ಲಿ ಹಸಿವಿನಿಂದ ಜನರು ಸಾಯುತ್ತಿರುವಾಗ 1,000 ಕೋ.ರೂ. ವೆಚ್ಚದಲ್ಲಿ ಹೊಸ ಸಂಸತ್ ಕಟ್ಟಡ ವನ್ನು ನಿರ್ಮಿಸುವ ಅಗತ್ಯವಿತ್ತೇ? ಎಂದು ತಮಿಳುನಾಡಿನ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಆರಂಭಿಸಿರುವ ತನ್ನ ಪಕ್ಷ ಮಕ್ಕಳ್ ನೀಧಿ ಮೈಯಮ್(ಎಂಎನ್‌ಎಂ)ಪರವಾಗಿ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಆರ್ಥಿಕತೆಯು ತೀವ್ರ ಪ್ರಕ್ಷುಬ್ಧತೆ ಎದುರಿಸುತ್ತಿರುವ ಈ ಸಮಯದಲ್ಲಿ ಇಂತಹ ಬೃಹತ್ ಆರ್ಥಿಕ ವೆಚ್ಚದ ಅರ್ಥವೇನು? ಎಂದು ಕೇಳಿದ್ದಾರೆ.

ಭಾರತದ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಕೊರೋನಾಗೆ ತುತ್ತಾಗಿ ದೇಶದ ಜನತೆ ಜೀವನೋಪಾಯವನ್ನು ಕಳೆದುಕೊಂಡಿರುವಾಗ 1,000 ಕೋ.ರೂ. ವೆಚ್ಚದ ಹೊಸ ಸಂಸತ್ತು ಕಟ್ಟಡ ಏಕೆ ಬೇಕು? ಚೀನಾದ ಗೋಡೆ ನಿರ್ಮಿಸುವಾಗ ಸಾವಿ ರಾರು ಜನರು ಸತ್ತರು. ಆಗ ಇದನ್ನು ಜನರ ರಕ್ಷಣೆಗಾಗಿ ಕಟ್ಟಲಾಗುತ್ತಿದೆ ಎಂದು ಆಡಳಿತಗಾರರು ಹೇಳಿಕೊಂಡಿದ್ದರು. 1,000 ಕೋ.ರೂ. ವೆಚ್ಚದ ಸಂಸತ್ತನ್ನು ಯಾರ ರಕ್ಷಣೆಗಾಗಿ ಕಟ್ಟುತ್ತಿದ್ದೀರಿ. ಇದನ್ನು ಗೌರವಾನ್ವಿತ ಪ್ರಧಾನಮಂತ್ರಿ ದಯವಿಟ್ಟು ಉತ್ತರಿಸಬೇಕು ಎಂದು ಕಮಲ ಟ್ವೀಟಿಸಿದ್ದಾರೆ.