ತಿರುವನಂತಪುರಂ: ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಮಳೆ ನೀರು ಸಂಗ್ರಹಿಸಲು ಕೂಲಿಕಾರ್ಮಿಕರು ನೆಲ ಅಗೆಯುತ್ತಿದ್ದಾಗ ಚಿನ್ನ ಮತ್ತು ಬೆಳ್ಳಿಯ ಆಭರಣಗಳಿದ್ದ ಹುಂಡಿಗಳು ಪತ್ತೆಯಾಗಿವೆ. ಈ ಕುರಿತು ಪುರಾತತ್ವ ಇಲಾಖೆ ಪರಿಶೀಲನೆ ಮತ್ತು ತನಿಖೆ ನಡೆಸಲು ಮುಂದಾಗಿದೆ.
ಶಾಲಾ ಆವರಣದಲ್ಲಿ ಒಂದು ಮೀಟರ್ ಆಳದಲ್ಲಿ ನೆಲ ಅಗೆಯುವಾಗ, ಚಿನ್ನದ ಆಭರಣಗಳನ್ನು ಹೊಂದಿರುವ ಪೆಟ್ಟಿಗೆ ಪತ್ತೆಯಾಗಿದೆ. ಆಗ ಇಬ್ಬರು ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದರು. ಅವರು ಪೆಟ್ಟಿಗೆಯೊಳಗೆ ಬಾಂಬ್, ನಿಧಿ ಅಥವಾ ಮಾಟಮಂತ್ರ ಮಾಡಿಸಿರುವ ವಸ್ತುಗಳು ಇರಬಹುದು ಎಂದು ಭಾವಿಸಿದ್ದರು.
ಅಲ್ಲಿಗೆ ಬಂದ ಇತರ ಕೂಲಿಕಾರ್ಮಿಕರು ಹಾಗೂ ಸಾರ್ವಜನಿಕರು ಪೆಟ್ಟಿಗೆ ತೆರೆದಿದ್ದಾರೆ. ಆಗ ಅದರಲ್ಲಿ ಚಿನ್ನದ ತಾಳಿಗಳು ಸೇರಿದಂತೆ ಇತರೆ ಆಭರಣಗಳು ಮತ್ತು ಬೆಳ್ಳಿಯ ವಸ್ತುಗಳು ಕಂಡುಬಂದಿವೆ.
ಜನರು ಕೂಡಲೇ ವಿಷಯವನ್ನು ಗ್ರಾಮ ಪಂಚಾಯತಿಗೆ ತಿಳಿಸಿದ್ದಾರೆ. ಆದರೆ ಯಾರೂ ಅತ್ತ ತಲೆ ಹಾಕಿಲ್ಲ. ಮಾರನೇ ದಿನ ಪಂಚಾಯಿತಿಯವರು ಕೂಲಿ ಕಾರ್ಮಿಕರನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡು ಆಭರಣಗಳನ್ನು ವಶಕ್ಕೆ ಪಡೆದಿದ್ದಾರ ಎಂದು ಕೂಲಿಕಾರ್ಮಿಕರು ತಿಳಿಸಿದ್ದಾರೆ.
ಗುಂಡಿಯ ಬಳಿ 345 ಬೆಳ್ಳಿ ಮತ್ತು ಬಂಗಾರದ ಆಭರಣಗಳು ಪತ್ತೆಯಾಗಿದ್ದವು. ಎನ್ನಲಾಗಿದೆ. ಆದರೆ ಕೆಲವರು ಆಭರಣಗಳನ್ನು ನಾಪತ್ತೆ ಮಾಡಿರುವ ಶಂಕೆಯಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ.