Saturday, 14th December 2024

ಮಹಿಳೆಯ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟ

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವೇಳೆ ಮಹಿಳೆಯೊಬ್ಬರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಹಿಳೆಯ ಜೇಬಿನಲ್ಲಿದ್ದ ಮೊಬೈಲ್ ಫೋನ್ ಸ್ಫೋಟಗೊಂಡಿದ್ದರಿಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.

ಮಹಿಳೆಯ ತಲೆಯ ಮೇಲೆ ಬೈಕ್ ಬಿದ್ದಿದೆ. ಅಪಘಾತದ ವೇಳೆ ಮಹಿಳೆ ಹೆಲ್ಮೆಟ್ ಧರಿಸಿರಲಿಲ್ಲ.

ಮಹಿಳೆ ನೆಲಕ್ಕುರುಳುತ್ತಿದ್ದಂತೆ ಸ್ಥಳದ ಸುತ್ತ ದೊಡ್ಡ ಜನ ಜಮಾಯಿಸಿದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಬರುವಷ್ಟರಲ್ಲಿ ಮಹಿಳೆ ಮೃತಪಟ್ಟಿದ್ದಾಳೆ ಎಂದು ಆಸ್ಪತ್ರೆ ಅಧಿಕಾರಿಗಳು ಘೋಷಿಸಿದ್ದಾರೆ.

ಮಹಿಳೆ ತನ್ನ ಸ್ಕೂಟರ್‌ನಲ್ಲಿ ಕಾನ್ಪುರ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮೃತ ಮಹಿಳೆಯನ್ನು ಫರೂಕಾಬಾದ್ ಜಿಲ್ಲೆಯ ನೆಹ್ರಾರಿಯಾ ಗ್ರಾಮದ ನಿವಾಸಿ ಪೂಜಾ(28) ಎಂದು ಗುರುತಿಸಲಾಗಿದೆ. ಕಾನ್ಪುರ ರೈಲು ನಿಲ್ದಾಣದಿಂದ ಮುಂಬೈಗೆ ರೈಲು ಹಿಡಿಯಲು ಮಹಿಳೆ ತೆರಳುತ್ತಿದ್ದಳು.

ಚೌಬೆಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮನ್ಪುರ್ ಗ್ರಾಮದ ಬಳಿ ಕಾನ್ಪುರ-ಅಲಿಘರ್ ಹೆದ್ದಾರಿಯಲ್ಲಿರುವ ಪೆಟ್ರೋಲ್ ಪಂಪ್‌ನ ಮುಂಭಾಗದಲ್ಲಿ ಈ ದುರಂತ ಘಟನೆ ಸಂಭವಿಸಿದೆ.