Friday, 13th December 2024

ಭಯೋತ್ಪಾದಕ ಕೃತ್ಯ ಕಾಯ್ದೆಗೆ ಚಿನ್ನ ಕಳ್ಳ ಸಾಗಣೆ ಪ್ರಕರಣ ಒಳಪಡುವುದಿಲ್ಲ: ಕೇರಳ ಹೈಕೋರ್ಟ್‌

ಕೊಚ್ಚಿ: ಕಸ್ಟಮ್ಸ್‌ ಕಾಯ್ದೆಯ ವ್ಯಾಪ್ತಿಗೆ ಚಿನ್ನ ಕಳ್ಳ ಸಾಗಣೆ ಬರುವುದರಿಂದ, ಈ ಪ್ರಕರಣವನ್ನು ಭಯೋತ್ಪಾದಕ ಕೃತ್ಯ ಕಾಯ್ದೆಯಡಿ ವ್ಯಾಖ್ಯಾನಿಸಲು ಬರುವುದಿಲ್ಲ’ ಎಂದು ಕೇರಳ ಹೈಕೋರ್ಟ್‌ ಶನಿವಾರ ತಿಳಿಸಿತು.

ನ್ಯಾಯಮೂರ್ತಿಗಳಾದ ಎ.ಹರಿಪ್ರಸಾದ್ ಮತ್ತು ಎಂ.ಅನಿತಾ ಅವರನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ರಾಜತಾಂತ್ರಿಕ ಮಾರ್ಗ ದುರುಪಯೋಗಪಡಿಸಿಕೊಂಡು ಚಿನ್ನ ಕಳ್ಳ ಸಾಗಣೆ ಮಾಡಿದ ಪ್ರಕರಣದ ಹತ್ತು ಆರೋಪಿಗಳಿಗೆ ಎನ್‌ಐಎ ವಿಶೇಷ ನ್ಯಾಯಾಲಯ ನೀಡಿದ್ದ ಜಾಮೀನು ಆದೇಶವನ್ನು ಪ್ರಶ್ನಿಸಿ ಎನ್‌ಐಎ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಗೊಳಿಸಿತು.

ಕಳೆದ ವರ್ಷ ಜುಲೈ 5 ರಂದು ಕೇರಳದಲ್ಲಿ ರಾಜತಾಂತ್ರಿಕ ಮಾರ್ಗವನ್ನು ದುರುಪಯೋಗಪಡಿಸಿಕೊಂಡು ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾಗಣೆ ಮಾಡುತ್ತಿದ್ದ ₹15 ಕೋಟಿ ಮೌಲ್ಯದ 30 ಕೆ.ಜಿ ಬಂಗಾರವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ಎನ್‌ಐಎ ಜುಲೈ 11ರಂದು ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಹಾಗೂ ಸಂದೀಪ್‌ ನಾಯರ್‌ ಎಂಬುವರನ್ನು ಬೆಂಗಳೂರಿನಲ್ಲಿ ಬಂಧಿಸಿತ್ತು.