Tuesday, 15th October 2024

ಲಸಿಕೆ ಪೂರೈಕೆ, ಹಂಚಿಕೆ: ಯೋಜಿತ ಕಾರ್ಯಕ್ರಮ ಅಗತ್ಯ

ಗುರಿ ೨.೨ ಶತಕೋಟಿ; ೧.೨ ಶತಕೋಟಿ ಡೋಸ್ ಉತ್ಪಾದನೆ ಸಾಧ್ಯ

ಒಂದೊಂದು ಹನಿಯೂ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು

ಲೇಖನ: ಕಿರಣ್ ಮಜುಂದಾರ್ ಷಾ ಬಯೋಕಾನ್ ಮುಖ್ಯಸ್ಥೆ

ಇಡೀ ವಿಶ್ವದಂತೆ ಭಾರತವೂ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಟ ನಡೆಸುತ್ತಿದೆ. ಎರಡನೇ ಅಲೆಗೆ ಸಿಲುಕಿ
ತತ್ತರಿಸುತ್ತಿದೆ. ಇದು ದೇಶದ ಜನರ ಜೀವ ಮತ್ತು ಜೀವನ ಎರಡನ್ನೂ ಕಸಿಯುತ್ತಿದೆ. ಕೆಲವು ತಿಂಗಳ ಹಿಂದಷ್ಟೇ ಸುಧಾರಣೆಯ
ಹಳಿಗೆ ಮರಳುತ್ತಿದ್ದ ದೇಶದ ಅರ್ಥವ್ಯವಸ್ಥೆ ಮತ್ತೆ ನಲುಗಿದೆ. ಈ ಮಹಾಮಾರಿಯನ್ನು ಕಟ್ಟಿಹಾಕಲು ಲಸಿಕೆಯೊಂದೇ ರಾಮಬಾಣ ಎಂಬ ಅರಿವು ಎಲ್ಲರಿಗೂ ಇದೆ.

ಆದರೆ ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ದೇಶವೆಂಬ ಹೆಗ್ಗಳಿಕೆ ಪಡೆದಿದ್ದರೂ, ಭಾರತದಲ್ಲಿ ಲಸಿಕೆಗಾಗಿ ಹಾಹಾಕಾರ ಎದ್ದಿದೆ. ಸಾರ್ವತ್ರಿಕವಾಗಿ, ದೊಡ್ಡಪ್ರಮಾಣದಲ್ಲಿ ಲಸಿಕೆ ಹಾಕಲು ಸರಕಾರ ಹೆಣಗಾಡುತ್ತಿದೆ. 2021ರ ಆರಂಭದಲ್ಲಿ ನಮ್ಮ ಲಸಿಕೆ ಅಭಿಯಾನವು ಆಶಾದಾಯಕವಾಗಿಯೇ ಆರಂಭವಾಗಿತ್ತು. ಆಗ ಎರಡು ಲಸಿಕೆಗಳಿಗೆ ಅನುಮತಿ ಸಿಕ್ಕಿತ್ತು ಹಾಗೂ ಕರೋನಾ ಪ್ರಕರಣಗಳ ಭಾರ ಕಡಿಮೆ ಇತ್ತು. ಆದರೀಗ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಕರೋನಾ ಪ್ರಕರಣಗಳು ಹಾಗೂ ಸಾವಿನ ಸಮಸ್ಯೆಯನ್ನು ನಾವೀಗ ಎದುರಿಸುತ್ತಿದ್ದೇವೆ.

ಮೊದಲ ಅಲೆಯ ಸಂದರ್ಭದಲ್ಲಿ ವಯಸ್ಸಾದವರು ಹಾಗೂ ಇತರ ಆರೋಗ್ಯ ಸಮಸ್ಯೆ ಇರುವ 45 ವರ್ಷ ಮೀರಿದವರು ಕರೋನಾದಿಂದ ಹೆಚ್ಚಾಗಿ ಸಾವಿ ಗೀಡಾಗುತ್ತಿದ್ದರು. ಆದರೆ ಈ ಬಾರಿ ಯುವಜನರೇ ಹೆಚ್ಚಾಗಿ ಬಲಿಯಾಗು ತ್ತಿದ್ದಾರೆ. ನಮ್ಮ ದೇಶದಲ್ಲಿ ಶೇ.25 ರಷ್ಟು ಜನರು 45ಕ್ಕಿಂತ ಕಡಿಮೆ ವಯಸ್ಸಿನ ವರಿದ್ದು, ನಮ್ಮ ಲಸಿಕೆ ನೀಡಿಕೆ ಕಾರ್ಯಕ್ರಮಕ್ಕೆ ಇದು ದೊಡ್ಡ ಸವಾಲಾಗಿದೆ.

2021 ರ ಜನವರಿ ಮಧ್ಯಭಾಗದಲ್ಲಿ ನಾವು ಲಸಿಕಾ ಕಾರ್ಯಕ್ರಮವನ್ನು ಆರಂಭಿಸಿದಾಗ 60 ವರ್ಷ ಮೀರಿದ ಹಿರಿಯ ನಾಯಕರಿಗೆ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವುದರಿಂದ ಆರಂಭಿಸಿದೆವು. ಮಾರ್ಚ್ 1ರ ವೇಳೆಗೆ 45 ವರ್ಷ ಮೀರಿದ ವರಿಗೂ ಕೊಡಲು ಆರಂಭಿಸಿದೆವು. ಮೇ 1ರ ಹೊತ್ತಿಗೆ 18 ವರ್ಷ ತುಂಬಿದವರಿಗೂ ಇದನ್ನು ವಿಸ್ತರಿಸಲಾಯಿತು. ಇದೆಲ್ಲ ಸರಿ. ಆದರೆ ಇದನ್ನು ಸಾಧಿಸುವುದೆಂತು. ಇದು ನಮ್ಮಿಂದ ಸಾಧ್ಯವೆ? ಇಷ್ಟು ಜನರಿಗೆ ಕೊಡಲು ನಮ್ಮಲ್ಲಿ ಅಷ್ಟು ಪ್ರಮಾಣದ ಲಸಿಕೆ ದಾಸ್ತಾನಿದೆಯೇ ಎಂಬ ಪ್ರಶ್ನೆ ಪ್ರಮುಖವಾಗಿ ಎದ್ದು ನಿಲ್ಲುತ್ತದೆ.

ಈಗಿನಿಂದ ಡಿಸೆಂಬರ್ ಅಂತ್ಯದ ವೇಳೆಗೆ ಹತ್ತಿರ ಹತ್ತಿರ 2.2 ಶತಕೋಟಿ ಡೋಸ್‌ಗಳಷ್ಟು ಲಸಿಕೆಯನ್ನು ಉತ್ಪಾದಿಸುವ ಗುರಿ
ಹೊಂದಲಾಗಿದೆ ಎಂದು ಸರಕಾರ ತಿಳಿಸಿದೆ. ಆದರೆ ಇದು ಮಹಾತ್ವಾಕಾಂಕ್ಷಿ ಮತ್ತು ಅವಾಸ್ತವಿಕ ಗುರಿ ಎಂಬುದು ಬಹುತೇಕರ
ಅಭಿಪ್ರಾಯ. ಕೋವಿಶೀಲ್ಡ್, ಕೋವ್ಯಾಕ್ಸೀನ್, ಸ್ಪುಟ್ನಿಕ್, ಕೋವಿಡ್ -ಡಿ, ನೊವಾವ್ಯಾಕ್ಸ್ ಹಾಗೂ ಜೆ ಆಂಡ್ ಜೆ ಎಲ್ಲವೂ ಸೇರಿದರೂ 2021ರ ಡಿಸೆಂಬರ್ ವೇಳೆಗೆ ಸರಿಸುಮಾರು 1.2 ಶತಕೋಟಿ ಡೋಸ್ ಗಳನ್ನು ಉತ್ಪಾದಿಸಬಲ್ಲವು ಎಂಬುದು ಒಂದು ಅಂದಾಜು.  ಮಾಡರ್ನಾ, ಫೈಜರ್, ಸ್ಪುಟ್ನಿಕ್ ಇತ್ಯಾದಿ ಆಮದಿತ ಲಸಿಕೆಗಳನ್ನು ಸೇರಿಸಿದರೆ ಇನ್ನೂ 1.2 ಕೋಟಿ ಡೋಸ್ ಆಗಬಹುದು.

ಲಸಿಕೆ ಕಾರ್ಯಕ್ರಮ, ತಂತ್ರ ಹೇಗಿರಬೇಕು?: ಈ ಸನ್ನಿವೇಶದಲ್ಲಿ ನಮ್ಮ ಲಸಿಕೆ ಕಾರ್ಯಕ್ರಮ ಮತ್ತು ತಂತ್ರ ಹೇಗಿರಬೇಕು ಎಂಬುದನ್ನು ಚಿಂತಿಸಬೇಕಾದ ಕಾಲವಿದು. ಕರೋನಾ ವೈರಸ್ ಹರಡುವುದನ್ನು ತಡೆಗಟ್ಟುವುದು ಹಾಗೂ ಯಾರು ಹೆಚ್ಚಾಗಿ ಬಲಿಯಾಗುವ ಅಪಾಯವಿರುವುದೋ ಅವರಿಗೆ ರಕ್ಷಣೆ ನೀಡುವುದು- ಇವೆರಡು ಅಂಶಗಳನ್ನು ನಾವು ಗಮನದಲ್ಲಿ ಇರಿಸಿಕೊಳ್ಳ ಬೇಕಾಗುತ್ತದೆ. ನಮ್ಮ ಒಟ್ಟು ಜನಸಂಖ್ಯೆಯಲ್ಲಿ 18 ವರ್ಷ ಮೀರಿದವರ ಪಾಲು ಶೇ.60 ರಷ್ಟು ಮಾತ್ರ ಎಂಬುದನ್ನು ಪರಿಗಣಿಸಿ ದರೆ, ನಾವು ದೇಶಾದ್ಯಂತ 78 ಕೋಟಿ ಜನರಿಗೆ ಲಸಿಕೆ ನೀಡಬೇಕಾಗುತ್ತದೆ.

18 ಕೋಟಿ ಜನರು ಈಗಾಗಲೇ ಒಂದು ಡೋಸ್ ಲಸಿಕೆ ಪಡೆದಿದ್ದಾರೆ ಎಂಬ ಅಂಶವನ್ನು ಪರಿಗಣಿಸಿದರೆ ಈ ಲೆಕ್ಕ 60 ಕೋಟಿ ಡೋಸ್‌ಗೆ ಬಂದು ನಿಲ್ಲುತ್ತದೆ. ಶೇ.60 ರಷ್ಟು ಮಂದಿಗೆ ಸಾಮೂಹಿಕ ರೋಗ ನಿರೋಧಕ ಶಕ್ತಿ (ಹರ್ಡ್ ಇಮ್ಯೂನಿಟಿ) ಇದೆ ಎಂದು ಭಾವಿಸಿದರೆ, 36 ಕೋಟಿಗೆ ಹಾಗೂ 72 ಕೋಟಿ ಡೋಸ್‌ಗೆ ಬಂದು ನಿಲ್ಲುತ್ತದೆ. ಇದನ್ನೆಲ್ಲ ಗಮನಿಸಿದರೆ ನಮ್ಮ ಪರಿಸ್ಥಿತಿ ಸುರಕ್ಷತಾದಾಯಕವಾಗಿದೆ ಹಾಗೂ ನಾವು ಮೂರನೇ ಅಲೆಯನ್ನು ಸಮರ್ಥವಾಗಿ ನಿಯಂತ್ರಿಸಬಹುದು ಎಂಬ ಭರವಸೆ ಇದೆ. ಆದರೆ ಲಸಿಕೆಯ ಒಂದೊಂದು ಹನಿಯೂ ವ್ಯರ್ಥವಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಸಮರ್ಪಕ ಸಾಗಣೆ ವ್ಯವಸ್ಥೆಯ ಅಗತ್ಯವಿದೆ. ರಾಜ್ಯ ಮಟ್ಟದಲ್ಲಿ ವಿಕೇಂದ್ರೀಕೃತ ವ್ಯವಸ್ಥೆಯಿಂದ ಮಾತ್ರ ಇದು ಸಾಧ್ಯ.

ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳ ಸಹಯೋಗ ಇದಕ್ಕೆ ಬಹಳ ಮುಖ್ಯ. ಹಾಗೆಯೇ ನಮ್ಮ ಲಸಿಕೆ ನೀಡಿಕೆ ತಂತ್ರವನ್ನು
ಸಾಂಕ್ರಾಮಿಕ ರೋಗ ತಜ್ಞರು ನಿರ್ದೇಶಿಸುವಂತಿರಬೇಕು. ಜಿಲ್ಲಾವಾರು ಜನಸಂಖ್ಯಾ ಸಾಂದ್ರತೆ, ಕೇಸ್‌ಲೋಡ್, ಸಾವಿನ
ಪ್ರಮಾಣ ಮತ್ತು ಪ್ರಕರಣಗಳು ದ್ವಿಗುಣಗೊಳ್ಳುವ ಪ್ರಮಾಣ -ಇತ್ಯಾದಿ ಅಂಶಗಳನ್ನು ಲಸಿಕಾ ಕಾರ್ಯಕ್ರಮ ಆಧರಿಸಬೇಕು.

ಇದಕ್ಕಿಂತ ಉತ್ತಮ ಎಂದರೆ ಕೊಳೆಗೇರಿ, ಮಾರುಕಟ್ಟೆ ಹಾಗು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಸಾಮೂಹಿಕ ಲಸಿಕಾ
ಕಾರ್ಯಕ್ರಮಗಳನ್ನು ಏರ್ಪಡಿಸಿದರೆ ಈ ಕೆಲಸ ತ್ವರಿತಗೊಳ್ಳುತ್ತದೆ. ಇನ್ನು ವೃತ್ತಿಯ ಆಧಾರದಲ್ಲಿ ನೋಡುವುದಾದರೆ, ಡೆಲಿವರಿ ಬಾಯ್ಸ್, ಕ್ಯಾಬ್ ಡ್ರೈವರ್ ಗಳು, ಮಾರ್ಕೆಟ್‌ನಲ್ಲಿ ಮಾರಾಟಗಾರರು, ಸ್ಲಮ್‌ಗಳು, ಕಟ್ಟಡ ಕಾರ್ಮಿಕರು, ಬಹುಮಹಡಿ ಕಟ್ಟಡಗಳು, ಅಪಾಟ್ ಮೆಂಟ್‌ಗಳು, ತರುವಾಯ ಸ್ವತಂತ್ರ ಮನೆ ಹೊಂದಿದವರು- ಹೀಗೆ ಈ ಸರಣಿಯಲ್ಲಿ ಲಸಿಕೆ ನೀಡಿಕೆ ಕಾರ್ಯಕ್ರಮ ನಡೆಯಬೇಕು.

ಒಂದೊಮ್ಮೆ ನಗರ ಪ್ರದೇಶಗಳು ಸುರಕ್ಷಿತವಾದ ಬಳಿಕ ಬರುವ, ಹೋಗುವ ಸ್ಥಳಗಳಲ್ಲಿ ಬಿಗಿ ಪಹರೆ ಏರ್ಪಡಿಸಬೇಕು. ಬಳಿಕ ಗ್ರಾಮೀಣ ಪ್ರದೇಶಗಳಿಗೆ ಈ ಕಾರ್ಯಕ್ರಮವನ್ನು ವಿಸ್ತರಿಸಬಹುದು. ಈ ತಂತ್ರ ಅನುಸರಿಸಿದರೆ, ಮುಂದಿನ ಮೂರು ತಿಂಗಳಲ್ಲಿ 1.5 ಕೋಟಿ ಡೋಸ್‌ಗಳನ್ನು ನೀಡಿದ ಕೂಡಲೇ ಸೋಂಕು ಹರಡುವುದನ್ನು ನಿಲ್ಲಿಸಬಹುದಾಗಿದೆ. ಅನಂತರ ಹೆಚ್ಚುವರಿ 3 ಕೋಟಿ ಡೋಸ್ ಗಳ ಮೂಲಕ ಇಡೀ ರಾಜ್ಯಕ್ಕೆ ಲಸಿಕೆ ನೀಡಬಹುದು. ಅಷ್ಟೊತ್ತಿಗೆ ಲಸಿಕೆ ಪೂರೈಕೆ ಪರಿಸ್ಥಿತಿಯೂ ಸುಧಾರಿಸ ಬಹುದು. ಈ ಮಾದರಿಯನ್ನು ಅನುಸರಿಸಿದರೆ ಒಳ್ಳೆಯದು. ಇದನ್ನೇ ಇಡೀ ದೇಶಕ್ಕೆ ಮಾದರಿಯಾಗಿ ಬಳಸಬಹುದು. ಕರ್ನಾಟಕ ಮಾಡೆಲ್ ಎಂದು ಇದು ಪ್ರಸಿದ್ಧವಾಗಬಹುದು.

ಕರ್ನಾಟಕ ಮಾಡೆಲ್
ಕರ್ನಾಟಕ ರಾಜ್ಯವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವು ದಾದರೆ ಬೆಂಗಳೂರು ಸಹಜವಾಗಿ ಮೊದಲ ಆಯ್ಕೆಯಾಗಿರ ಬೇಕಾಗುತ್ತದೆ. ಅನಂತರ ಮೈಸೂರು, ಬಳ್ಳಾರಿ, ದಕ್ಷಿಣ ಕನ್ನಡ, ಧಾರವಾಡ, ಹಾಸನ, ತುಮಕೂರು, ಶಿವಮೊಗ್ಗ, ಬೆಳಗಾವಿ, ಕಲಬುರ್ಗಿ-ಹೀಗೆ ಸಾಗುತ್ತದೆ. ಶೇ.50 ರಷ್ಟು ಲಸಿಕೆಯನ್ನು ಬೆಂಗಳೂರಿಗೆ ಮೀಸಲಿಟ್ಟು, ಉಳಿದ ಶೇ.50 ರಷ್ಟನ್ನು ಹೆಚ್ಚು ಪ್ರಕರಣಗಳಿರುವ ಪ್ರದೇಶಗಳಿಗೆ ತೆಗೆದಿರಿಸಿದರೆ, ನಮಗೆ ಪ್ರತಿ ತಿಂಗಳು 50 ಲಕ್ಷ ಡೋಸ್‌ನಷ್ಟು ಲಸಿಕೆ ಬೇಕಾಗುತ್ತದೆ.

ಪ್ರತಿ ವ್ಯಕ್ತಿಗೆ ಒಂದು ಡೋಸ್ ಲಸಿಕೆ ಹಾಕುವ ಲೆಕ್ಕದಲ್ಲಿ ಸೋಂಕು ಹರಡುವಿಕೆಯನ್ನು ಮೂರು ತಿಂಗಳೊಳಗಾಗಿ ನಿಲ್ಲಿಸ ಬಹುದು. ಪ್ರತಿ ತಿಂಗಳು 50 ಲಕ್ಷ ಮಂದಿಗೆ ಲಸಿಕೆ ನೀಡಬೇಕೆಂದರೆ ನಾವು ರಾಜದ್ಯಂತ ಪ್ರತಿದಿನ 1.5 ಲಕ್ಷ ಜನರಿಗೆ ಕೊಡಬೇಕಾ ಗುತ್ತದೆ. ಬೆಂಗಳೂರಿನ 25 ಲಕ್ಷ ಜನರಿಗೆ ಪ್ರತಿ ತಿಂಗಳು ಲಸಿಕೆ ನೀಡಬೇಕಾದಲ್ಲಿ ಸರಿಸುಮಾರು 500 ಲಸಿಕಾ ಕೇಂದ್ರಗಳು ಅಗತ್ಯ. ಇಲ್ಲಿ, ಪ್ರತಿದಿನ 100-250 ಡೋಸ್ ನೀಡಬೇಕು.