Wednesday, 11th December 2024

ಅಧಿಕಾರಕ್ಕೇರಲು ಹಜಾರೆ ಅವರನ್ನು ಆಮ್ ಆದ್ಮಿ ಪಕ್ಷ ಬಳಸಿಕೊಂಡಿದೆ: ರಿಜಿಜು ವಾಗ್ದಾಳಿ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಿದ್ದು, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಭಾನುವಾರ ವಾಗ್ದಾಳಿ ನಡೆಸಿದ್ದಾರೆ.

ಭ್ರಷ್ಟಾಚಾರ ನಿರ್ಮೂಲನೆ ಹೆಸರಿನಲ್ಲಿ ಅಧಿಕಾರ ಹಿಡಿಯಲು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರನ್ನು ಆಮ್ ಆದ್ಮಿ ಪಕ್ಷ ಬಳಸಿಕೊಂಡಿದೆ ಎಂದು ಆರೋಪಿಸಿದರು. ಅಣ್ಣಾ ಹಜಾರೆಯವರ ಹಳೆಯ ಸಂದರ್ಶನದ ವಿಡಿಯೋ ತುಣುಕುಗಳನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರು ದೆಹಲಿ ಅಬಕಾರಿ ನೀತಿ ಯನ್ನು ಟೀಕಿಸಿದ್ದಾರೆ ಎಂದು ಹೇಳಲಾಗಿದೆ. ‘ಈಗ ಅವರು ಅಧಿಕಾರಕ್ಕೇರಿದ್ದಾರೆ. ಅವರು ಅಣ್ಣಾಜಿಯ ಮಾತನ್ನು ಕೇಳುವುದಿಲ್ಲ ಎಂದು ನನಗೆ ಖಾತ್ರಿಯಿದೆ.

ಅಣ್ಣಾಜಿ ಮತ್ತು ಜನರನ್ನು ಮೂರ್ಖರನ್ನಾಗಿಸಲು ಭ್ರಷ್ಟಾಚಾರ ನಿರ್ಮೂಲನೆ ಒಂದು ನೆಪವಾಗಿತ್ತು. ಅಧಿಕಾರ ಹಿಡಿಯಲು ಮತ್ತು ಭ್ರಷ್ಟಾಚಾರ ನಿರ್ಮೂಲನೆ ಹೆಸರಿನಲ್ಲಿ ಸಂಪನ್ಮೂಲಗಳನ್ನು ಲೂಟಿ ಮಾಡಲು ಮಾತ್ರ ಅಣ್ಣಾಜಿಯನ್ನು ಬಳಸಿಕೊಳ್ಳಲಾಗಿದೆ’ ಎಂದು ಕೇಂದ್ರ ಸಚಿವರು ಟ್ವಿಟರ್ನಲ್ಲಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆದಿದ್ದಾರೆ.

ಪ್ರಕರಣದಲ್ಲಿ ಅರವಿಂದ ಕೇಜ್ರಿವಾಲ್ ಅವರು ಭಾನುವಾರ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಿದ್ದರು.