Friday, 13th December 2024

Kolkata Doctor Murder: ದೀದಿ ಸರ್ಕಾರದ ವಿರುದ್ಧ ಮತ್ತೆ ತಿರುಗಿ ಬಿದ್ದ ವೈದ್ಯರು; ನಾಳೆಯಿಂದ ಪ್ರತಿಭಟನೆ ಶುರು

doctors protest

ನವದೆಹಲಿ: ಕೋಲ್ಕತ್ತಾ ಟ್ತೈನಿ ವೈದ್ಯೆ ಕೊಲೆ ಅತ್ಯಾಚಾರ ಪ್ರಕರಣ(Kolkata Doctor Murder) ಖಂಡಿಸಿ ವೈದ್ಯರು ಸೋಮವಾರದಿಂದ ಮತ್ತೆ ಪ್ರತಿಭಟನೆ(Kolkata Doctors Protest) ಆರಂಭಿಸಲು ಮುಂದಾಗಿದ್ದಾರೆ. ಸೋಮವಾರ ಸುಪ್ರೀಂ ಕೋರ್ಟ್‌(Supreme Court)ನಲ್ಲಿ ಆರ್‌ಜಿ ಕರ್ ಮೆಡಿಕಲ್‌ ಕಾಲೇಜಿನ ಪ್ರಕರಣದ ವಿಚಾರಣೆಯ ನಂತರ ಪಶ್ಚಿಮ ಬಂಗಾಳದ ಕಿರಿಯ ವೈದ್ಯರು ತಮ್ಮ ಪ್ರತಿಭಟನೆಯನ್ನು ಪುನರಾರಂಭಿಸುವುದಾಗಿ ಎಚ್ಚರಿಕೆ ಹಾಕಿದ್ದಾರೆ.

ಕಳೆದ ತಿಂಗಳು ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯರ ಮೇಲೆ ಅಮಾನುಷ ಅತ್ಯಾಚಾರ ಮತ್ತು ಹತ್ಯೆಗೆ ಖಂಡಿಸಿ 41 ದಿನಗಳ ಕಾಲ ನಡೆಸುತ್ತಿದ್ದ ಪ್ರತಿಭಟನೆಯನ್ನು ವೈದ್ಯರು ಕೊನೆಗೊಳಿಸಿದ್ದರು. ಆದರೆ ಶುಕ್ರವಾರ ಸರ್ಕಾರಿ ಆಸ್ಪತ್ರೆಯಲ್ಲಿ ದುಷ್ಕರ್ಮಿಗಳ ತಂಡವೊಂದು ವೈದ್ಯರ ಮೇಲೆ ಹಲ್ಲೆ ನಡೆಸಿದ ನಂತರ ಸರ್ಕಾರದ ವಿರುದ್ಧ ಮತ್ತೆ ತಿರುಗಿ ಬಿದ್ದಿರುವ ವೈದ್ಯರು ಸೋಮವಾರದಿಂದ ಪ್ರತಿಭಟನೆ ಪುನರಾರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಾವು ರಾಜ್ಯ ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ನೀಡುತ್ತಿದ್ದೇವೆ. ಆಸ್ಪತ್ರೆಗಳಲ್ಲಿ ಭದ್ರತೆಯನ್ನು ಬಲಪಡಿಸಲು ಮತ್ತು ಆಸ್ಪತ್ರೆಯ ಮೂಲಸೌಕರ್ಯಗಳನ್ನು ಸಜ್ಜುಗೊಳಿಸಲು ಸರ್ಕಾರವು ಯಾವುದೇ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾದರೆ, ನಾವು ಸೋಮವಾರದಿಂದ ಮತ್ತೆ ಪೂರ್ಣ ಪ್ರಮಾಣದ ಮುಷ್ಕರ ನಡೆಸುತ್ತೇವೆ ಎಂದು ಕಿರಿಯ ವೈದ್ಯ ಅನಿಕೇತ್ ಮಹಾತಾ ಹೇಳಿದ್ದಾರೆ.

ಶುಕ್ರವಾರ ಸಂಜೆ ಉತ್ತರ 24 ಪರಗಣದ ಸಾಗೋರ್ ದತ್ತಾ ಆಸ್ಪತ್ರೆಯಲ್ಲಿ ದುಷ್ಕರ್ಮಿಗಳ ತಂಡವೊಂದು ಕಿರಿಯ ವೈದ್ಯರು ಮತ್ತು ನರ್ಸ್‌ಗಳ ಮೇಲೆ ದಾಳಿ ಮಾಡಿದ ಘಟನೆ ವರದಿಯಾಗಿದೆ. ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಸಾಗಿಸಲ್ಪಟ್ಟ ಮಹಿಳೆಯೊಬ್ಬರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು. ವೈದ್ಯರ ನಿರ್ಲಕ್ಷ್ಯದಿಂದಲೇ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಮಹಿಳೆಯ ಕುಟುಂಬಸ್ಥರು ಆಸ್ಪತ್ರೆಯ ಕಿರಿಯ ವೈದ್ಯರು ಮತ್ತು ನರ್ಸ್‌ಗಳ ಮೇಲೆ ಹಲ್ಲೆ ನಡೆಸಿದ್ದರು. ಕೆಲವು ವೈದ್ಯರು ಮತ್ತು ನರ್ಸ್‌ಗಳು ಗಾಯಗೊಂಡಿದ್ದರೆ, ದಾಳಿಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್‌ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಆಗಸ್ಟ್‌ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು. ಕುತ್ತಿಗೆ ಮುರಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಟ್ರೈನಿ ವೈದ್ಯೆ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿರುವ ವೈದ್ಯರ ಒತ್ತಾಯಕ್ಕೆ ಕೊನೆಗೂ ಮಮತಾ ಬ್ಯಾನರ್ಜಿ ಸರ್ಕಾರ ಮಣಿದಿದೆ. ವೈದ್ಯರ ಬೇಡಿಕೆಯಂತೆ ಕೋಲ್ಕತ್ತಾ ಪೊಲೀಸ್‌ ಕಮಿಷನರ್‌ ಮತ್ತು ಆರೋಗ್ಯ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಈ ಸುದ್ದಿಯನ್ನೂ ಓದಿ: Kolkata Doctors Protest: 38 ದಿನಗಳ ಪ್ರತಿಭಟನೆ ಇಂದೇ ಅಂತ್ಯ? ಕೋಲ್ಕತ್ತಾ ವೈದ್ಯರ ನಿರ್ಧಾರ ಏನು?