Friday, 13th December 2024

Kolkata doctors protest: ಡಾಕ್ಟರ್ಸ್‌ ಡಿಮ್ಯಾಂಡ್‌ಗೆ ಮಣಿದ ದೀದಿ; ಕಮಿಷನರ್‌ ಸೇರಿ ಸರ್ಕಾರಿ ಅಧಿಕಾರಿಗಳ ಎತ್ತಂಗಡಿ

Kolkata Doctors protest

ಕೋಲ್ಕತ್ತಾ: ಟ್ರೈನಿ ವೈದ್ಯೆ ಕೊಲೆ ಪ್ರಕರಣ(Kolkata Doctor murder) ಖಂಡಿಸಿ ಪ್ರತಿಭಟನೆ(Kolkata doctors protest) ನಡೆಸುತ್ತಿರುವ ವೈದ್ಯರ ಒತ್ತಾಯಕ್ಕೆ ಕೊನೆಗೂ ಮಮತಾ ಬ್ಯಾನರ್ಜಿ(Mamata Banerjee) ಸರ್ಕಾರ ಮಣಿದಿದೆ. ವೈದ್ಯರ ಬೇಡಿಕೆಯಂತೆ ಕೋಲ್ಕತ್ತಾ ಪೊಲೀಸ್‌ ಕಮಿಷನರ್‌ ಮತ್ತು ಆರೋಗ್ಯ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಕೋಲ್ಕತ್ತಾ ಪೊಲೀಸ್‌ ಕಮಿಷನರ್‌ ವಿನೀತ್‌ ಗೋಯಲ್‌ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವ ಸರ್ಕಾರ, ಅವರ ಸ್ಥಾನಕ್ಕೆ 1998 ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಮನೋಜ್‌ ಕುಮಾರ್‌ ಅವರನ್ನು ನೇಮಿಸಲಾಗಿದೆ. ಇವರನ್ನು ಕಳೆದ ವರ್ಷ ಜನರಿಯಲ್ಲಿ ಹೆಚ್ಚುವರಿ ಡಿಜಿಪಿ(ಕಾನೂನು ಸುವ್ಯವಸ್ಥೆ)ಯಾಗಿ ನೇಮಕಗೊಂಡಿದ್ದರು. ಇನ್ನು ವಿನೀತ್‌ ಅವರು 2021ರಿಂದ ಪಶ್ಚಿಮ ಬಂಗಾಳ ಪೊಲೀಸ್‌ ಕಮಿಷನರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮಂಗಳವಾರ ಮಧ್ಯಾಹ್ನ ಅಧಿಸೂಚನೆಯಲ್ಲಿ ವರ್ಗಾವಣೆ ಮತ್ತು ನೇಮಕಾತಿಗಳನ್ನು ಪ್ರಕಟಿಸಲಾಗಿದ್ದು, ಇತರ ನಾಲ್ವರು ಪೊಲೀಸ್ ಅಧಿಕಾರಿಗಳ ಹೆಸರುಗಳನ್ನೂ ಸೇರಿಸಲಾಗಿದೆ. ಅವರಲ್ಲಿ ಡೆಪ್ಯುಟಿ ಕಮಿಷನರ್ (ಉತ್ತರ ವಿಭಾಗ) ಅಭಿಷೇಕ್ ಗುಪ್ತಾ ಅವರನ್ನು ವರ್ಗಾವಣೆ ಮಾಡಿ ದೀಪಕ್ ಸರ್ಕಾರ್ ಅವರನ್ನು ನೇಮಿಸಲಾಗಿದೆ. ಮತ್ತೊಂದೆಡೆ ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ. ಕೌಸ್ತಭ್‌ ಮತ್ತು ಆರೋಗ್ಯ ಸೇವೆಗಳ ನಿರ್ದೇಶಕ ಡಾ. ಡೆಬಸಿಶ್‌ ಹಾಲ್ಡರ್‌ ಅವರನ್ನು ಸೇವೆಯಿಂದ ವಜಾಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೇ ಡಾ. ಕೌಸ್ತ್‌ಭ್‌ ಸ್ಥಾನಕ್ಕೆ ಡಾ. ಸುಪರ್ಣಾ ದತ್ತಾ ಮತ್ತು ಹಾಲ್ಡರ್‌ ಸ್ಥಾನಕ್ಕೆ ಡಾ.ಸ್ವಪ್ನನ್‌ ಸೊರೆನ್‌ ಅವರನ್ನು ನೇಮಿಸಲಾಗಿದೆ.

ಕೋಲ್ಕತ್ತಾ ಟ್ರೈನಿ ವೈದ್ಯೆ ಕೊಲೆ ಅತ್ಯಾಚಾರ ಪ್ರಕರಣ ಖಂಡಿಸಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಕೈಬಿಡುವ ಅಥವಾ ಮುಂದುವರೆಸುವ ಬಗ್ಗೆ ಇಂದು ಮಹತ್ವದ ನಿರ್ಧಾರ ಘೋಷಣೆಯಾಗಲಿದೆ. ಕಳೆದ 38 ದಿನಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಇಂದು ತಮ್ಮ ಪ್ರತಿಭಟನೆಯನ್ನು ಹಿಂಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಪೊಲೀಸ್ ಕಮಿಷನರ್ ವಿನೀತ್ ಕುಮಾರ್ ಗೋಯಲ್ ಮತ್ತು ಇಬ್ಬರು ಆರೋಗ್ಯ ಅಧಿಕಾರಿಗಳನ್ನು ವಜಾಗೊಳಿಸುವ ಬಗ್ಗೆ ಸರ್ಕಾರ ಭರವಸೆ ನೀಡಿತ್ತು. ಇದೀಗ ಈ ಭರವಸೆ ಈಡೇರಿದ್ದು, ಈ ಹಿನ್ನೆಲೆ ಇಂದಿನಿಂದ ವೈದ್ಯರು ಪ್ರತಿಭಟನೆ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಸೆ.10ರ ಸಂಜೆ ಐದು ಗಂಟೆಯಿಂದ ವೈದ್ಯರು ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಮರಳುವಂತೆ ಸುಪ್ರೀಂಕೋರ್ಟ್‌ ಆದೇಶಿಸಿತ್ತು. ಇದರ ಬೆನ್ನಲ್ಲೇ ಪ್ರತಿಭಟನಾ ಸ್ಥಳಕ್ಕೆ ಭೇಟಿ ಕೊಟ್ಟಿ ಸಿಎಂ ಮಮತಾ ಬ್ಯಾನರ್ಜಿ ವೈದ್ಯರ ಮನವೊಲಿಸಲು ಯತ್ನಿಸಿದರು. ಇದೀಗ ವೈದ್ಯರ ಬೇಡಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಹೀಗಾಗಿ ಪ್ರತಿಭಟನೆ ಕೈಬಿಡುವ ಸಾಧ್ಯತೆ ಹೆಚ್ಚಿದೆ.

ಏನಿದು ಘಟನೆ?

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್‌ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಆಗಸ್ಟ್‌ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು. ಕುತ್ತಿಗೆ ಮುರಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.

ಈ ಸುದ್ದಿಯನ್ನೂ ಓದಿ: Kolkata Doctors Protest: 38 ದಿನಗಳ ಪ್ರತಿಭಟನೆ ಇಂದೇ ಅಂತ್ಯ? ಕೋಲ್ಕತ್ತಾ ವೈದ್ಯರ ನಿರ್ಧಾರ ಏನು?