Friday, 13th December 2024

Kolkata Horror : ಕೊಲ್ಕತ್ತಾದ ಆರ್‌ಜಿ ಕರ್‌ ಕಾಲೇಜಿನ ಸಂತ್ರಸ್ತೆಯ ಪ್ರತಿಮೆ ಧ್ವಂಸ

Kolkata Horror

ಕೋಲ್ಕತ್ತಾ : ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ (RG Kar) ನಡೆದ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ (Kolkata Horror) ಪ್ರಕರಣದ ಸಂತ್ರಸ್ತೆಯ ಪ್ರತಿಮೆ ಒಡೆದಿದೆ ಎಂದು ಭಾನುವಾರ ತಿಳಿದು ಬಂದಿದೆ. ಸಂತ್ರಸ್ತೆಯ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಕೊಲ್ಕತ್ತದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಪ್ರತಿಭಟನೆಯ ರೂಪವಾಗಿ ದ್ರೊಹೋ ಗ್ಯಾಲರಿಯಲ್ಲಿ (Droho Gallery) ಒಂದು ವೈದ್ಯರ ಸಮವಸ್ತ್ರದಲ್ಲಿರುವ ಪ್ರತಿಮೆ ಹಾಗೂ ಮತ್ತೊಂದು ಸೀರೆಯುಟ್ಟ ಪ್ರತಿಮೆಯನ್ನು ಇಡಲಾಗಿತ್ತು.

ಗ್ಯಾಲರಿಯ ಮಧ್ಯಭಾಗದಲ್ಲಿ ಇರಿಸಲಾಗಿದ್ದ ಪ್ರತಿಮೆಯು ಆಕಸ್ಮಿಕವಾಗಿ ಬಿದ್ದು ಒಡೆದಿದೆಯೋ ಇಲ್ಲಾ ವಿಧ್ವಂಸಕ ಕೃತ್ಯವೋ ಎಂಬುದು ಇನ್ನೂ ತಿಳಿದು ಬಂದಿಲ್ಲ. “ಶನಿವಾರ ರಾತ್ರಿ ನಾವು ಆಸ್ಪತ್ರೆಯಿಂದ ಹೊರಟಾಗ ಪ್ರತಿಮೆ ಸರಿಯಾಗಿಯೇ ಇತ್ತು. ಆದರೆ ಭಾನುವಾರ ಬೆಳಗ್ಗೆ ಪ್ರತಿಮೆ ನೆಲಕ್ಕೆ ಬಿದ್ದು ಒಡೆದು ಹೋಗಿರುವುದನ್ನು ಕಂಡೆವು ಇದು ಆಕಸ್ಮಿಕವಾಗಿ ನಡೆದಿದೆಯೋ ಇಲ್ಲಾ ಯಾರೋ ಉದ್ದೇಶಪೂರ್ವಕವಾಗಿ ಮಾಡಿದ್ದಾರೋ ಎಂಬುದು ನಮಗೆ ತಿಳಿದಿಲ್ಲ” ಎಂದು ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದಾರೆ.

ಪ್ರಕರಣದ ಪ್ರಧಾನ ಆರೋಪಿ ಸಂಜಯ್ ರಾಯ್ ವಿಚಾರಣೆ ಇಂದಿನಿಂದ ಪ್ರಾರಂಭವಾಗಲಿದೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 64 ಮತ್ತು 66ರ ಪ್ರಕರಣ ದಾಖಲಾಗಿದೆ. ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್‌ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಆಗಸ್ಟ್‌ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು.

ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು. ಕುತ್ತಿಗೆ ಮುರಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಟ್ರೈನಿ ವೈದ್ಯೆ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿರುವ ವೈದ್ಯರ ಒತ್ತಾಯಕ್ಕೆ ಕೊನೆಗೂ ಮಮತಾ ಬ್ಯಾನರ್ಜಿ ಸರ್ಕಾರ ಮಣಿದಿದೆ. ವೈದ್ಯರ ಬೇಡಿಕೆಯಂತೆ ಕೋಲ್ಕತ್ತಾ ಪೊಲೀಸ್‌ ಕಮಿಷನರ್‌ ಮತ್ತು ಆರೋಗ್ಯ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇದಾದ ಬಳಿಕ ವಿವಿಧ ಬೇಡಿಕೆಗೆ ಆಗ್ರಹಿಸಿದ ಕಿರಿಯ ವೈದ್ಯರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

ಇದನ್ನೂ ಓದಿ : Kolkata Murder Case: ಸಂಧಾನ ಯಶಸ್ವಿ; ದೀದಿ ಭೇಟಿ ಬಳಿಕ ಉಪವಾಸ ಸತ್ಯಾಗ್ರಹ ಕೈಬಿಟ್ಟ ವೈದ್ಯರು

ಮುಖ್ಯಮಂತ್ರಿ ಬ್ಯಾನರ್ಜಿ ಅವರು ವೈದ್ಯರ ಜತೆ ಸಂಧಾನ ಮಾತುಕತೆ ನಡೆಸಿದ್ದು, ಪ್ರತಿಭಟನಾ ನಿತರ ವೈದ್ಯರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ವೈದ್ಯಾಧಿಕಾರಿಗಳ ಬೇಡಿಕೆಯಂತೆ ಮುಖ್ಯಮಂತ್ರಿ ಮತ್ತು ಪ್ರತಿಭಟನಾನಿರತ ವೈದ್ಯರ ನಡುವಿನ ಕೊನೆಯ ಸಭೆಯು ಎರಡು ಗಂಟೆಗಳಿಗೂ ಹೆಚ್ಚು ಕಾಲ ನಡೆದಿತ್ತು. ಇದಾದ ಬಳಿಕ ವೈದ್ಯರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದರು.