Wednesday, 11th December 2024

ಪ್ಯಾಲೆಸ್ಟೀನ್‌ನ ಜನತೆಗೆ ಬೆಂಬಲ: 23 ರಂದು ಕೆಪಿಸಿಸಿ ಬೃಹತ್‌ ರ‍್ಯಾಲಿ

ತಿರುವನಂತಪುರ: ಯುದ್ಧಪೀಡಿತ ಪ್ಯಾಲೆಸ್ಟೀನ್‌ನ ಜನತೆಗೆ ಬೆಂಬಲ ನೀಡುವ ಸಲುವಾಗಿ ಕೆಪಿಸಿಸಿ (ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿ) ಬೃಹತ್‌ ರ‍್ಯಾಲಿಯನ್ನು ಆಯೋಜಿಸುವುದಾಗಿ ಘೋಷಿಸಿದೆ.

ನ. 23 ರಂದು ಕೋಯಿಕ್ಕೋಡ್ ಬೀಚ್‌ನಲ್ಲಿ ರ‍್ಯಾಲಿ ನಡೆಯಲಿದೆ. ಕೇರಳದಲ್ಲಿ ರಾಜಕೀಯ ಮತ್ತು ಚುನಾವಣಾ ಲಾಭ ಪಡೆಯಲು ಪ್ಯಾಲೆಸ್ಟೀನ್‌ ಜನರ ದುರವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಆಡಳಿತಾರೂಢ ಸಿಪಿಐ(ಎಂ)ನ ಬೂಟಾಟಿಕೆಯನ್ನು ಬಯಲಿಗೆಳೆಯಲು ಈ ರ‍್ಯಾಲಿಯು ವೇದಿಕೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್‌ ಹೇಳಿದ್ದಾರೆ.

ರ‍್ಯಾಲಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಚಾಲನೆ ನೀಡಲಿದ್ದು, ಭಾರಿ ಜನಸ್ತೋಮ ಒಟ್ಟುಗೂಡುವ ಮೂಲಕ ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಅವರು ಹೇಳಿದರು. ಕಾಂಗ್ರೆಸ್‌ ಇಸ್ರೇಲ್‌ಗೆ ಬೆಂಬಲ ನೀಡುತ್ತಿದ್ದು, ಪ್ಯಾಲೆಸ್ಟೀನ್‌ ಜನರ ವಿರುದ್ಧವಾಗಿದೆ ಎಂದು ಸಿಪಿಐ(ಎಂ)ನ ಕಟು ಟೀಕೆಗಳ ಹಿನ್ನೆಲೆಯಲ್ಲಿ ಈ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.

ಪ್ಯಾಲೆಸ್ಟೀನ್ ಪರ ರ‍್ಯಾಲಿ ಆಯೋಜಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಆರ್ಯಡನ್ ಶೌಕತ್ ಅವರಿಂದ ವಿವರಣೆ ಕೇಳಿದ ಕೆಪಿಸಿಸಿ ನಡೆಯನ್ನು ಎಡಪಕ್ಷವು ಪ್ರಶ್ನಿಸಿದೆ.