Saturday, 14th December 2024

ಕೇರಳ ರಾಜ್ಯದ ಪಾಲಾದ ಕೆಎಸ್‌ಆರ್‌ಟಿಸಿ ಬ್ರಾಂಡ್‌

ತಿರುವನಂತಪುರಂ: ಕರ್ನಾಟಕದ ಸಾರಿಗೆ ಸಂಸ್ಥೆ ಕೆಎಸ್‌ಆರ್‌ಟಿಸಿ ಬ್ರಾಂಡ್‌ ಕೇರಳ ರಾಜ್ಯದ ಪಾಲಾಗಿದೆ. ಏಳು ವರ್ಷಗಳ ಕಾನೂನು ಹೋರಾಟದ ಬಳಿಕ ಕರ್ನಾಟಕ ಕೆಎಸ್‌ಆರ್‌ಟಿಸಿ ಹೆಸರು ಬಳಕೆ ಮಾಡದಂತೆ ಆದೇಶ ಹೊರಡಿಸಲಾಗಿದೆ.

ಟ್ರೇಡ್ ಮಾರ್ಕ್‌ ರಿಜಿಸ್ಟರಿ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್‌) ಆಧಾರದ ಮೇಲೆ ಈ ಕುರಿತು ತೀರ್ಪು ನೀಡಿದೆ. ಕರ್ನಾಟಕ ಸ್ಟೇಟ್‌ ರೋಡ್‌ ಟ್ರಾನ್ಸ್‌’ಪೋರ್ಟ್‌ ಕಾರ್ಪೋರೇಷನ್ (KSRTC) ವಿಸ್ತೃತ ರೂಪವನ್ನು ಕರ್ನಾಟಕ ಬಳಕೆ ಮಾಡುವಂತಿಲ್ಲ.

ಕಳೆದ ಕೆಲವು ವರ್ಷಗಳಿಂದ ಕರ್ನಾಟಕದ ಮತ್ತು ಕೇರಳ ರಾಜ್ಯದ ನಡುವೆ ಕೆಎಸ್‌ಆರ್‌ಟಿಸಿ ವಿಸ್ತೃತ ರೂಪಕ್ಕಾಗಿ ಕಾನೂನು ಹೋರಾಟ ನಡೆಯುತ್ತಿತ್ತು. ಈ ಹೋರಾಟದಿಂದ ಕೇರಳಕ್ಕೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ. ಕಳೆದ ಹಲವು ವರ್ಷಗಳಿಂದ ರಾಜ್ಯದ ಸಾರಿಗೆ ನಿಗಮ ನಷ್ಟ ಎದುರಿಸುತ್ತಿದೆ.

ಕೇರಳ ಮತ್ತು ಕರ್ನಾಟಕ 2013ರಲ್ಲಿ ಕೆಎಸ್‌ಆರ್‌ಟಿಸಿ ವಿಸ್ತ್ರತ ರೂಪಕ್ಕಾಗಿ ಕಾನೂನು ಹೋರಾಟವನ್ನು ತೀವ್ರಗೊಳಿಸಿದವು. ಕೇರಳ ರಾಜ್ಯವು ಕೇರಳ ಸ್ಟೇಟ್‌ ರೋಡ್‌ ಟ್ರಾನ್ಸ್ ಪೋರ್ಟ್‌ (Kerala State Road Transport Corporation) ಹೆಸರಿನಲ್ಲಿ ರಾಜ್ಯ ದಲ್ಲಿ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ.

ಈಗ ತೀರ್ಪು ಪ್ರಕಟವಾಗಿದ್ದು ಕೆಎಸ್‌ಆರ್‌ಟಿಸಿ ಕೇರಳದ ಪಾಲಾಗಿದೆ. ಕೆಎಸ್‌ಆರ್‌ಟಿಸಿ ಎಂಬ ಹೆಸರನ್ನು ಕೇರಳ 1962ರಲ್ಲೇ ನೋಂದಣಿ ಮಾಡಿಸಿದೆ. ಕರ್ನಾಟಕ 1972ರಲ್ಲಿ ನೋಂದಣಿ ಮಾಡಿಸಿದ್ದು ಎಂಬ ಅಂಶವನ್ನು ತೀರ್ಪು ನೀಡುವಾಗ ಪರಿಗಣಿಸ ಲಾಗಿದೆ.

ತೀರ್ಪಿನ ಕುರಿತು ಸಾರಿಗೆ ಸಚಿವರ ಪ್ರತಿಕ್ರಿಯೆ 

ತೀರ್ಪಿನಲ್ಲಿ ಏನಿದೆ ಎಂಬ ಅಂಶವು ನಮಗೆ ಅಧಿಕೃತವಾಗಿ ಇನ್ನೂ ಬಂದಿಲ್ಲ, ಅದು ಲಭ್ಯವಾದ ನಂತರ ಕರ್ನಾಟಕ ರಾಜ್ಯದ ಮುಂದಿನ ನಿಲುವು ಮತ್ತು ಕಾನೂನು ಹೋರಾಟ ಏನು ಎಂಬುದರ ಬಗ್ಗೆ ತೀರ್ಮಾನಿಸಲಾಗುವುದು ಎಂಬುದಾಗಿ ಉಪ ಮುಖ್ಯ ಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ಒಂದು ರಾಜ್ಯವು ಮತ್ತೊಂದು ರಾಜ್ಯದ ಜೊತೆಗೆ ಯಾವುದೇ ಸಂಘರ್ಷವಿಲ್ಲದೆ ಸೌಹಾರ್ದಯುತವಾಗಿ ಸಂಬಂಧವನ್ನು ಇಟ್ಟು ಕೊಂಡು ಹೋಗಬೇಕೆಂದು ಈ ಫೆಡರಲ್ ಸಿಸ್ಟಮ್ ಹೇಳುತ್ತದೆ.

ಕರ್ನಾಟಕವಾಗಲಿ ಕೇರಳವಾಗಲಿ ಪರಸ್ಪರ ಸಾರಿಗೆ ಕ್ಷೇತ್ರದಲ್ಲಿ ಲಾಭಗಳಿಸುವ ಮೇಲಾಟಕ್ಕೆ ಅಥವಾ ಸ್ಪರ್ಧೆಗೆ ಮುಂದಾಗದೆ ಸಾರ್ವಜನಿಕರ ಹಿತಾಸಕ್ತಿ ಮತ್ತು ಸೇವೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿವೆ. ಹೀಗಾಗಿ ಈ ವಿಷಯವನ್ನು ಯಾವುದೇ ರಾಜ್ಯಗಳು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಳ್ಳಬಾರದು ಎಂದರು. ಕರ್ನಾಟಕದಲ್ಲಿ ಕೆಎಸ್‌ಆರ್ಟಿಸಿ ಎಂಬ ಹೆಸರಿದ್ದರೆ ಅದರಿಂದ ಕೇರಳ ರಾಜ್ಯದ ಕೆಎಸ್‌ಆರ್ಟಿಸಿ ಸಂಸ್ಥೆಗೆ ಯಾವುದೇ ನಷ್ಟವೇನಿಲ್ಲ. ಕರ್ನಾಟಕವು ಕೇರಳದ ಸಾರಿಗೆ ಸಂಸ್ಥೆಗಳೊಂದಿಗೆ ಯಾವತ್ತೂ ಪೈಪೋಟಿಗೆ ಇಳಿದಿದ್ದಿಲ್ಲ. ಎಂಬುದನ್ನು ಕೇರಳ ಮೊದಲು ಅರ್ಥಮಾಡಿಕೊಳ್ಳಬೇಕು ಎಂದಿ ದ್ದಾರೆ.