Wednesday, 11th December 2024

Lal Bahadur Shastri: ಲಾಲ್ ಬಹಾದ್ದೂರ್ ಶಾಸ್ತ್ರಿ ಕುರಿತ ಆಸಕ್ತಿದಾಯಕ ಸಂಗತಿಗಳಿವು

Lal Bahadur Shastri

ದೇಶಾದ್ಯಂತ ಇಂದು ಮಹಾತ್ಮ ಗಾಂಧೀಜಿಯವರ (Mahatma Gandhi) ಜನ್ಮದಿನದ ಜತೆ, ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ಸ್ವತಂತ್ರ ಭಾರತದ ಎರಡನೇ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ (Lal Bahadur Shastri) ಅವರ ಜನ್ಮದಿನವನ್ನೂ ಆಚರಿಸಲಾಗುತ್ತಿದೆ.

1904ರ ಅಕ್ಟೋಬರ್ 2ರಂದು ಉತ್ತರ ಪ್ರದೇಶದಲ್ಲಿ (ಮೊಘಲ್ಸರಾಯ್) ಜನಿಸಿದ ಅವರು “ಜೈ ಜವಾನ್ ಜೈ ಕಿಸಾನ್” (Jai Jawan Jai Kisan) ಎಂಬ ಘೋಷಣೆಯಿಂದ ಹೆಚ್ಚಿನ ಖ್ಯಾತಿ ಗಳಿಸಿದರು. 1962ರ ಯುದ್ಧದಲ್ಲಿ ಚೀನಾ ವಿರುದ್ಧ ಸೋಲಿನ ಬಳಿಕ ದೇಶವನ್ನು ಪುನರ್ ಅಭಿವೃದ್ಧಿಗೊಳಿಸಲು ಸಹಾಯ ಮಾಡಿದರು. 1966ರ ಜನವರಿ 11ರಂದು ಆಗಿನ ಯುಎಸ್ಎಸ್ಆರ್‌ (ರಷ್ಯಾ) ತಾಷ್ಕೆಂಟ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಆದರೆ ಅವರ ಸಾವು ನಿಗೂಢತೆಯಿಂದ ಕೂಡಿದೆ.

Mahatma Gandhi: ಮಹಾತ್ಮಾ ಗಾಂಧಿ ಕುರಿತ 20 ಕುತೂಹಲಕಾರಿ ಸಂಗತಿಗಳಿವು

Lal Bahadur Shastri

ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಕುರಿತಾದ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.

  1. ಲಾಲ್ ಬಹಾದ್ದೂರ್ ಅವರು 1925ರಲ್ಲಿ ಪದವಿ ಪಡೆದ ಅನಂತರ ಕಾಶಿ ವಿದ್ಯಾಪೀಠ ವಿಶ್ವವಿದ್ಯಾನಿಲಯದಿಂದ ‘ಶಾಸ್ತ್ರಿ’ ಎಂಬ ಬಿರುದು ಪಡೆದರು.
  2. ಶಾಸ್ತ್ರಿಯವರು ತಮ್ಮ ಶಾಲಾ ದಿನಗಳಲ್ಲಿ ತಲೆಯ ಮೇಲೆ ಚೀಲ ಮತ್ತು ಬಟ್ಟೆಯನ್ನು ಹೊತ್ತುಕೊಂಡು ಗಂಗಾ ನದಿಯನ್ನು ಪ್ರತಿದಿನ ದಾಟುತ್ತಿದ್ದರು.
  3. ಉತ್ತರ ಪ್ರದೇಶದಲ್ಲಿ ಪೊಲೀಸ್ ಮತ್ತು ಸಾರಿಗೆ ನಿಯಂತ್ರಣ ಸಚಿವರಾಗಿ ಶಾಸ್ತ್ರಿ ಅವರು ಲಾಠಿ ಚಾರ್ಜ್‌ಗೆ ಬದಲಾಗಿ ಜನರನ್ನು ಚದುರಿಸಲು ನೀರಿನ ಜೆಟ್‌ಗಳನ್ನು ಬಳಸಿದ ಮೊದಲ ವ್ಯಕ್ತಿಯಾಗಿದ್ದಾರೆ. ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿ ಮಹಿಳೆಯರನ್ನು ಕಂಡಕ್ಟರ್ ಹುದ್ದೆಗೆ ನೇಮಕ ಮಾಡಲು ಇವರು ಮುಂದಾಗಿದ್ದರು.
  4. ಶ್ವೇತ ಕ್ರಾಂತಿ ಶಾಸ್ತ್ರಿಯವರ ಕಲ್ಪನೆ. ಹಾಲಿನ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ರಾಷ್ಟ್ರೀಯ ಅಭಿಯಾನ, ಗುಜರಾತ್‌ನ ಅಮುಲ್ ಹಾಲಿನ ಸಹಕಾರಕ್ಕೆ ಬೆಂಬಲ ಮತ್ತು 1965ರಲ್ಲಿ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯನ್ನು ರಚಿಸಿದರು.
  5. ಭಾರತದ ಆಹಾರ ಉತ್ಪಾದನೆಯನ್ನು ಉತ್ತೇಜಿಸಲು ಶಾಸ್ತ್ರಿ ಅವರು ಹಸಿರು ಕ್ರಾಂತಿಗೆ ಉತ್ತೇಜನ ನೀಡಿದರು.
  6. ಗೃಹ ಸಚಿವರಾಗಿದ್ದ ಸಮಯದಲ್ಲಿ ಶಾಸ್ತ್ರಿ ಅವರು ಭ್ರಷ್ಟಾಚಾರವನ್ನು ಎದುರಿಸಲು ಮೊದಲ ಸಮಿತಿಯನ್ನು ಸ್ಥಾಪಿಸಿದರು.
  7. ಯಾವುದೇ ರೀತಿಯ ಪರಿಶ್ರಮ ಇಲ್ಲದೆ ಶಾಸ್ತ್ರಿ ಅವರ ಮಗ ಕೆಲಸದಲ್ಲಿ ಬಡ್ತಿ ಪಡೆದಾಗ ಅದು ಶಾಸ್ತ್ರಿ ಅವರನ್ನು ಕೆರಳಿಸಿತು. ತಕ್ಷಣವೇ ಅವರು ಬಡ್ತಿಯನ್ನು ಹಿಂತೆಗೆದುಕೊಳ್ಳುವ ಆದೇಶವನ್ನು ನೀಡಿದರು.
  8. 1965ರಲ್ಲಿ ಪಾಕಿಸ್ತಾನದೊಂದಿಗಿನ ಯುದ್ಧದ ಅನಂತರ ದೇಶದಲ್ಲಿ ಭೀಕರ ಬರಗಾಲ ಎದುರಾಯಿತು. ಈ ಪರಿಸ್ಥಿತಿಗಳಿಂದ ಹೊರಬರಲು, ಶಾಸ್ತ್ರಿಯವರು ದೇಶವಾಸಿಗಳನ್ನು ಒಂದು ದಿನದ ಉಪವಾಸ ಮಾಡುವಂತೆ ವಿನಂತಿಸಿದರು ಮತ್ತು ‘ಜೈ ಜವಾನ್ ಜೈ ಕಿಸಾನ್’ ಘೋಷಣೆಯನ್ನು ನೀಡಿದರು.
  9. ಶಾಸ್ತ್ರಿಯವರು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಪಡೆದ 5,000 ರೂಪಾಯಿಗಳ ಕಾರಿನ ಸಾಲವನ್ನು ಅವರ ಹಠಾತ್ ಮರಣದ ಬಳಿಕ ವಿಧವೆ ಲಲಿತಾ ಅವರ ಪಿಂಚಣಿಯಿಂದ ಮರುಪಾವತಿಸಲಾಯಿತು.
  10. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನದ ಮೊದಲ ಮರಣೋತ್ತರ ಪ್ರಶಸ್ತಿ ಪುರಸ್ಕೃತರು ಲಾಲ್ ಬಹದ್ದೂರ್ ಶಾಸ್ತ್ರಿ.