ಪಾಟ್ನ: ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಲಾಲೂ ಯಾದವ್ ಹಾಗೂ ಕುಟುಂಬಕ್ಕೆ ಸೇರಿದ 6 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ.
ಲಾಲೂ ಯಾದವ್ ಹಾಗೂ ಅವರ ಕುಟುಂಬಕ್ಕೆ ಸೇರಿದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಇದು 3ನೇ ಬಾರಿಗೆ ವಶಕ್ಕೆ ಪಡೆಯುತ್ತಿದೆ. ಜಾರಿ ನಿರ್ದೇಶ ನಾಲಯ ಆಸ್ತಿಗಳನ್ನು ವಶಕ್ಕೆ ಪಡೆಯುತ್ತಿದ್ದಾಗ ಲಾಲೂ ಪ್ರಸಾದ್ ಯಾದವ್ ಬ್ಯಾಡ್ಮಿಂಟನ್ ಆಡುತ್ತಿದ್ದರು. ಈಗ ಆ ವೀಡಿಯೋ ವೈರಲ್ ಆಗತೊಡಗಿದೆ.
ಜಾರಿ ನಿರ್ದೇಶನಾಲಯದ ದಾಳಿ ಬೆನ್ನಲ್ಲೇ ಬಿಹಾರ ಬಿಜೆಪಿ ಮುಖ್ಯಸ್ಥ ಸಮರ್ಥ್ ಚೌಧರಿ ಪ್ರತಿಕ್ರಿಯೆ ನೀಡಿದ್ದು, ಈಗ ಆರ್ ಜೆಡಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಯು ಈ ಹಿಂದೆ, ಮಾಜಿ ರೈಲ್ವೆ ಸಚಿವರನ್ನು ಕ್ರಿಮಿನಲ್ ಎಂದು ಕರೆದಿತ್ತು ಅಷ್ಟೇ ಅಲ್ಲದೇ ಅವರು ರಾಜಕಾರಣ ಬಿಟ್ಟು ವಿಶ್ರಾಂತಿ ಪಡೆಯಬೇಕೆಂದು ಸಲಹೆ ನೀಡಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ, ಪಾಟ್ನಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್, ತಮ್ಮ ಪಕ್ಷ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಿದ್ಧಾಂತದಲ್ಲಿ ನಂಬಿಕೆ ಹೊಂದಿದೆ. ಲೋಕಸಭಾ ಚುನಾವಣೆಗೆ, ಮುಂಬರುವ ಸಮಯದಲ್ಲಿ, ನಾವು ಮಹಾರಾಷ್ಟ್ರದಲ್ಲಿ ಸಭೆ ನಡೆಸಲಿದ್ದೇವೆ, ಅಲ್ಲಿ ನಾವು ಮುಂದಿನ ಕಾರ್ಯತಂತ್ರವನ್ನು ಅಂತಿಮಗೊಳಿಸುತ್ತೇವೆ ಎಂದು ಹೇಳಿದ್ದರು.