Wednesday, 18th September 2024

ವಯನಾಡ್: ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಭೂಕುಸಿತ

ಕೇರಳ: ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ವಿವಿಧ ಗುಡ್ಡಗಾಡು ಪ್ರದೇಶಗಳಲ್ಲಿ ಮಂಗಳವಾರ ಭಾರಿ ಭೂಕುಸಿತ ಸಂಭವಿಸಿದೆ.

ಈವರೆಗೆ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 41 ಜನರು ಸಾವನ್ನಪ್ಪಿ, ನೂರಾರು ಜನರು ಸಿಕ್ಕಿಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಮುಂಡಕೈನಲ್ಲಿ ಮುಂಜಾನೆ 1:00 ಮತ್ತು 4:00 ರ ಸುಮಾರಿಗೆ ಭೂಕುಸಿತ ಸಂಭವಿಸಿದೆ.

ಚುರಲ್ಮಾಲಾ ಪಟ್ಟಣದ ವಾಹನಗಳು ಮತ್ತು ಕೆಲವು ಭಾಗಗಳು ಕೊಚ್ಚಿಹೋಗಿದ್ದು, ಅನೇಕ ಮನೆಗಳು ನಾಶವಾಗಿವೆ. ವೆಲ್ಲರ್ಮಾಲಾ ಶಾಲೆ ಸಂಪೂರ್ಣ ವಾಗಿ ಮುಳುಗಿತ್ತು. 400 ಕ್ಕೂ ಹೆಚ್ಚು ಕುಟುಂಬಗಳು ಬಾಧಿತವಾಗಿವೆ ಮತ್ತು ಅನೇಕ ಜನರು ಕಾಣೆಯಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಭಾರೀ ಮಳೆಯ ನಡುವೆಯೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಕುಟುಂಬ ಸದಸ್ಯರು ಸಹಾಯ ಕೋರುತ್ತಿದ್ದಾರೆ. ಕಂದಾಯ ಸಚಿವ ಕೆ.ರಾಜನ್ ಮತ್ತು ಸಚಿವ ಒ.ಆರ್.ಕೇಲು ಅವರು ವಯನಾಡ್ ಗೆ ಮರಳಿದ್ದು, ಪ್ರಯತ್ನಗಳ ಮೇಲ್ವಿಚಾರಣೆ ನಡೆಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಾಗಿ ಹೆಲಿಕಾಪ್ಟರ್ ಅನ್ನು ಕೋರಲಾಗಿದ್ದು, ಗಾಯಗೊಂಡ 50 ಕ್ಕೂ ಹೆಚ್ಚು ಜನರು ಮೆಪ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಯುಪಡೆಯ ಎರಡು ಹೆಲಿಕಾಪ್ಟರ್ಗಳಾದ ಎಂಐ 17 ಮತ್ತು ಎಎಲ್‌ಎಚ್ ಅನ್ನು ನಿಗದಿಪಡಿಸಲಾಗಿದೆ.

ಕೇರಳದಲ್ಲಿ ವರುಣಾರ್ಭಟ ಮುಂದುವರೆದಿದ್ದು, ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ರಣಮಳೆಯಿಂದಾಗಿ ಕೇರಳದ ವಯನಾಡ್ ಜಿಲ್ಲೆಯ ಮೂರು ಗ್ರಾಮಗಳಲ್ಲಿ ಭೀಕರ ಭೂ ಕುಸಿತ ಸಂಭವಿಸಿ 150ಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿಕೊಂಡಿದ್ದು, ಮಳೆಯ ನಡುವೆಯೇ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಕೇರಳದಲ್ಲಿ ಭಾರಿ ಮಳೆ ಮುಂದುವರೆದ ಹಿನ್ನೆಲೆಯಲ್ಲಿ ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೊಯಿಕ್ಕೋಡ್, ಮಲಪ್ಪುರಂ, ವಯನಾಡು, ಕಾಸರಗೋದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಪತ್ತನಂತಿಟ್ಟ, ಅಲಪ್ಪುಳ, ಕೊಟ್ತಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್ ನಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ.

Leave a Reply

Your email address will not be published. Required fields are marked *