Friday, 13th December 2024

ಕಾರಿನಿಂದ ಮದ್ಯದ ಬಾಟಲಿಗಳ ಲೂಟಿ: ವಿಡಿಯೋ ವೈರಲ್

ಪಾಟ್ನಾ: ಬಿಹಾರದ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ವಾಹನ ಅಪಘಾತಕ್ಕೀಡಾದ ನಂತರ ಜನರು ಕಾರಿನಿಂದ ಮದ್ಯದ ಬಾಟಲಿ ಗಳನ್ನು ಲೂಟಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಈ ಘಟನೆ ನಡೆದಿದ್ದು ಅಕ್ಟೋಬರ್ 30 ರಂದು. ಹೆದ್ದಾರಿಯಲ್ಲಿ ವಿದೇಶಿ ಮದ್ಯ ಸಾಗಿಸುತ್ತಿದ್ದ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿತ್ತು.

ಈ ವೇಳೆ, ದಾರಿಹೋಕರು ಸಹಾಯ ಮಾಡಲು ಬಂದಿದ್ದರು. ಆದರೆ, ಕಾರಿನಲ್ಲಿದ್ದವರು ಮದ್ಯದ ಬಾಟಲಿಗಳನ್ನು ತುಂಬಿದ ಪೆಟ್ಟಿಗೆಗಳನ್ನು ಬಿಟ್ಟು ಓಡಿಹೋಗಿದ್ದಾರೆ. ಬಳಿಕ ಸ್ಥಳೀಯರು ಹಾಗೂ ದಾರಿಹೋಕರು ವಾಹನದಲ್ಲಿದ್ದ ಮದ್ಯವನ್ನು ಲೂಟಿ ಮಾಡಿದ್ದು, ಜನರು ಹಲವು ಬಾಟಲಿಗಳನ್ನು ಹಿಡಿದುಕೊಂಡು ಓಡಿ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಘಟನೆಯ ಬಗ್ಗೆ ಮಾಹಿತಿ ಪಡೆದ ದೋಭಿ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಆದರೆ, ಮದ್ಯದ ಬಾಟಲಿಗಳನ್ನು ಲೂಟಿ ಮಾಡುವ ಜನರ ಗುಂಪು ತುಂಬಾ ದೊಡ್ಡದಾಗಿತ್ತು, ಪೊಲೀಸರು ಇದ್ದರೂ ಜನರು ಇನ್ನೂ ಮದ್ಯದ ಬಾಟಲಿಗಳನ್ನು ತೆಗೆದು ಕೊಳ್ಳುತ್ತಿದ್ದರು.

ಬಿಹಾರ ರಾಜ್ಯದಲ್ಲಿ 2016ರಿಂದ ಮದ್ಯಪಾನ ನಿಷೇಧಿಸಲಾಗಿದೆ.