Wednesday, 11th December 2024

5ನೆ ಹಂತದ ಲೋಕಸಭೆ ಚುನಾವಣೆ ನಾಳೆ

ವದೆಹಲಿ: ಮಹತ್ವದ 5ನೆ ಹಂತದ ಲೋಕಸಭೆ ಚುನಾವಣೆ ನಾಳೆ ನಡೆಯಲಿದ್ದು, ಭಾರಿ ಕುತೂಹಲ ಕೆರಳಿಸಿದೆ. ಘಟಾನುಘಟಿಗಳು ಸ್ಪರ್ಧಿಸಿರುವ ಹೈವೋಲ್ಟೇಜ್‌ ಕ್ಷೇತ್ರಗಳು ಇದರಲ್ಲಿ ಬರಲಿದ್ದು, ಈಗಾಗಲೇ ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

ಐದನೆ ಹಂತದಲ್ಲಿ ಒಟ್ಟು ಎಂಟು ರಾಜ್ಯಗಳ 49 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ 7, ಬಿಹಾರ, ಒಡಿಶಾದ 5, ಜಾರ್ಖಂಡ್‌ನ 3 ಹಾಗೂ ಜಮ್ಮು ಕಾಶ್ಮೀರದ ಒಂದು ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

ಇದರಲ್ಲಿ ಒಟ್ಟು 695 ಅಭ್ಯರ್ಥಿಗಳು ಕಣದಲ್ಲಿದ್ದು, ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ರಾಹುಲ್‌ಗಾಂಧಿ, ಅಮೇಥಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಇರಾನಿ, ಲಖನೌನಿಂದ ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ಸ್ಪರ್ಧಿಸಲಿದ್ದು, ಪಶ್ಚಿಮ ಬಂಗಾಳದ ಅರಣ್ಯ ಪ್ರದೇಶ ವ್ಯಾಪ್ತಿಯ ಜಂಗಲ್‌ ಮಹಲ್‌ ಪ್ರದೇಶದ ಕ್ಷೇತ್ರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಲಖನೌ, ಮೋಹನ್‌ಲಾಲ್‌ ಗಂಜ್‌, ರಾಯ್‌ಬರೇಲಿ, ಅಮೇಥಿ, ಜಲೌನ್‌, ಝಾನ್ಸಿ, ಹಮೀರ್‌ಪುರ್‌, ಬಂದಾ, ಫತೇಪುರ್‌, ಕೌಶಾಂಬಿ, ಬಾರಾಬಂಕಿ, ಫೈಜಾಬಾದ್‌, ಕೈಸರ್‌ಗಂಜ್‌ ಮತ್ತು ಗೋಂಡಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.

ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಾಲ್‌ ಕಿಶೋರ್‌ ಅವರು ಮೋಹನ್‌ಲಾಲ್‌ ಗಂಜ್‌ನಿಂದ ಸ್ಪರ್ಧಿಸುತ್ತಿದ್ದರೆ, ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವೆ ಸಾಧ್ವಿ ನಿರಂಜನ್‌ ಜ್ಯೋತಿ ಫತೇಪುರ್‌ ಕ್ಷೇತ್ರದಿಂದ ಮರು ಆಯ್ಕೆಗೆ ಕಣದಲ್ಲಿದ್ದಾರೆ.

ಇಲ್ಲಿ 2.68 ಕೋಟಿ ಮತದಾರರಿದ್ದು, ನಾಳೆ ಈ ಘಟಾನುಘಟಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

ಇಂಡಿಯಾ ಒಕ್ಕೂಟ ಸೀಟು ಹಂಚಿಕೆ ಮಾಡಿಕೊಂಡಿದ್ದು, ಪ್ರಬಲ ಪೈಪೋಟಿ ನೀಡುತ್ತಿದೆ. ಪ್ರಮುಖವಾಗಿ ಈಗ ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ಅವರು ನಾಲ್ಕನೆ ಬಾರಿಗೆ ಲಖನೌ ಸೆಂಟ್ರಲ್‌ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಇವರಿಗೆ ಹಾಲಿ ಶಾಸಕ ರವಿದಾಸ್‌‍ ಮೆಹೋತ್ರ ಸವಾಲೊಡ್ಡಿದ್ದಾರೆ.