Wednesday, 9th October 2024

LPG Price Hike: ತಿಂಗಳ ಆರಂಭದಲ್ಲೇ ಬೆಲೆ ಏರಿಕೆಯ ಶಾಕ್‌; ವಾಣಿಜ್ಯ ಬಳಕೆಯ 19 ಕೆಜಿ ಗ್ಯಾಸ್‌ ಸಿಲಿಂಡರ್ ದರ ಹೆಚ್ಚಳ

LPG Price Hike

ನವದೆಹಲಿ: ಅಕ್ಟೋಬರ್‌ 1ರಿಂದ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು (OMCs) 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆಯನ್ನು 48.50 ರೂ. – 50 ರೂ. ಹೆಚ್ಚಿಸಿವೆ (LPG Price Hike). ಇದರಿಂದ ಹಬ್ಬದ ಖುಷಿಯಲ್ಲಿದ್ದವರಿಗೆ ಬಹುದೊಡ್ಡ ಶಾಕ್‌ ಎದುರಾಗಿದೆ. ಈ ಮೂಲಕ ಸತತ ಎರಡು ತಿಂಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಏರಿಕಯಾದಂತಾಗಿದೆ. ಬೆಂಗಳೂರಿನಲ್ಲಿ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ 48.50 ರೂ. ಏರಿಕೆಯಾಗಿದ್ದು, ಪರಿಷ್ಕೃತ ಬೆಲೆ ಪ್ರಕಾರ ಇನ್ನು ಮುಂದೆ ಗೆ 1,818 ರೂ. ಪಾವತಿಸಬೇಕು. ಈ ಹಿಂದೆ 1,769.50 ರೂ. ಇತ್ತು.

ವಿವಿಧ ನಗರಗಳಲ್ಲಿನ ಪರಿಷ್ಕೃತ ದರ

ದರ ಪರಿಷ್ಕರಣೆಯ ಬಳಿಕ 19 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ದಿಲ್ಲಿಯಲ್ಲಿ 1,740 ರೂ., ಮುಂಬೈಯಲ್ಲಿ 1692.50 ರೂ., ಕೋಲ್ಕತ್ತಾದಲ್ಲಿ 1,850.50 ರೂ. ಮತ್ತು ಚೆನ್ನೈನಲ್ಲಿ 1,903 ರೂ.ಗೆ ತಲುಪಿದೆ. ಈ ಹಿಂದೆ ಸೆಪ್ಟೆಂಬರ್‌ನಲ್ಲಿಯೂ ಸಹ ಎಲ್‌ಪಿಜಿ ಸಿಲಿಂಡರ್ ದರ ಸುಮಾರು 39 ರೂ.ಗಳಷ್ಟು ಏರಿಕೆಯಾಗಿತ್ತು.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರತಿ ತಿಂಗಳ 1ನೇ ತಾರೀಕಿನಂದು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ರೀತಿಯ ಏರಿಳಿತಗಳು ಸಾಮಾನ್ಯವಾಗಿ ಇಂಧನ ವೆಚ್ಚಗಳು ಮತ್ತು ಮಾರುಕಟ್ಟೆ ಡೈನಾಮಿಕ್ಸ್ ಬದಲಾವಣೆಗಳಿಂದ ಪ್ರಭಾವಕ್ಕೆ ಒಳಗಾಗುತ್ತವೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಈ ಬೆಲೆ ಹೆಚ್ಚಳವು ರೆಸ್ಟೋರೆಂಟ್‌, ಹೋಟೆಲ್‌ ಮತ್ತು ಕ್ಯಾಟರಿಂಗ್ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಕೊನೆಯ ಬಾರಿಗೆ ಜುಲೈ 1ರಂದು 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ 30 ರೂ. ಕಡಿಮೆಯಾಗಿತ್ತು. ಇನ್ನು ಜೂನ್‌ 1ರಂದು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ 69.50 ರೂ. ಕಡಿಮೆ ಆಗಿತ್ತು. ಮೇ 1ರಂದು ದರ ಪರಿಷ್ಕರಿಸಿ 19 ರೂ. ಇಳಿಕೆ ಮಾಡಲಾಗಿತ್ತು. ಏಪ್ರಿಲ್‌ನಲ್ಲಿಯೂ 19 ಕೆಜಿಯ ಸಿಲಿಂಡರ್‌ ಬೆಲೆಯನ್ನು 30.50 ರೂ. ಇಳಿಸಲಾಗಿತ್ತು.

ಗೃಹಬಳಕೆಯ ಸಿಲಿಂಡರ್‌ ಬೆಲೆಯಲ್ಲಿ ವ್ಯತ್ಯಾಸವಿಲ್ಲ

ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಇಳಿಕೆ ಅಥವಾ ಏರಿಕೆ ಆಗಿಲ್ಲ. ಆ ಮೂಲಕ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರಿನಲ್ಲಿ ಗೃಹಬಳಕೆಯ ಸಿಲಿಂಡರ್‌ ಬೆಲೆ 805.50 ರೂ. ಇದೆ. ಇನ್ನು ದಿಲ್ಲಿಯಲ್ಲಿ 803 ರೂ., ಕೋಲ್ಕತ್ತಾದಲ್ಲಿ 829 ರೂ., ಮುಂಬೈನಲ್ಲಿ 802.50 ರೂ., ಚೆನ್ನೈನಲ್ಲಿ 818.50 ರೂ. ಇದೆ. 2023ರ ಜೂನ್‌ನಲ್ಲಿ ದಿಲ್ಲಿಯಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 1,103 ರೂ. ಇತ್ತು. ಆಗಸ್ಟ್‌ನಲ್ಲಿ 200 ರೂ.ಗಳ ಕಡಿತವನ್ನು ಘೋಷಿಸಿದ್ದರಿಂದ 903 ರೂ.ಗೆ ಇಳಿಯಾಗಿತ್ತು ಬಳಿಕ 2024ರ ಮಾರ್ಚ್‌ನಲ್ಲಿ ಬೆಲೆಯನ್ನು ಮತ್ತೂ 100 ರೂ. ಕಡಿತಗೊಳಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ: Stock Market: ಷೇರುಪೇಟೆಯಲ್ಲಿ ತಲ್ಲಣ; ಸೆನ್ಸೆಕ್ಸ್‌, ನಿಫ್ಟಿ ಭಾರೀ ಕುಸಿತ