Wednesday, 11th December 2024

ಚಲಿಸುತ್ತಿರುವ ರೈಲಿನಲ್ಲಿಯೇ ತನ್ನ ಪತ್ನಿಗೆ ತ್ರಿವಳಿ ತಲಾಕ್‌…!

ಕ್ನೋ: ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿನಲ್ಲಿಯೇ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿದ್ದಾನೆ. ತ್ರಿವಳಿ ತಲಾಕ್ ಎಂಬ ಅನಿಷ್ಟ ಪದ್ಧತಿಯನ್ನು ಕೇಂದ್ರ ಸರ್ಕಾರ ಈಗಾಗಲೇ ನಿಷೇಧಿಸಿದೆ.

ಮೊಹಮ್ಮದ್‌ ಅರ್ಷದ್‌ ಹೀಗೆ ತ್ರಿವಳಿ ತಲಾಕ್‌ ನೀಡಿದ ಭೂಪ. ತನ್ನ ಪತ್ನಿ ಅಫ್ಸಾನಾ (26) ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ಉತ್ತರ ಪ್ರದೇಶದ ಝಾನ್ಸಿ ಜಂಕ್ಷನ್‌ ಸಮೀಪ ಈ ಘಟನೆ ನಡೆದಿದೆ.

ರೈಲು ಝಾನ್ಸಿ ನಿಲ್ದಾಣಕ್ಕೆ ಬರುತ್ತಿದ್ದಂತೆ ಅರ್ಷದ್ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ರೈಲಿನಿಂದ ಇಳಿದಿದ್ದಾನೆ. ಹೋಗುವ ಮುನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದ ಎಂದು ಮೂಲಗಳು ತಿಳಿಸಿವೆ. ಅನಿರೀಕ್ಷಿತ ಆಘಾತದಿಂದ ತಬ್ಬಿಬ್ಬಾದ ಅಫ್ಸಾನಾ ಕೂಡಲೇ ರೈಲ್ವೇ ಪೊಲೀಸರನ್ನು ಸಂಪರ್ಕಿಸಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಮೊಹಮ್ಮದ್ ಅರ್ಷದ್‌ಗಾಗಿ ಹುಡುಕಾಟ ನಡೆಸಿದ್ದಾರೆ.

ಭೋಪಾಲ್‌ನ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್‌ ಎಂಜಿನಿಯರ್‌ ಆಗಿರುವ ಅರ್ಷದ್‌ ರಾಜಸ್ಥಾನದ ಕೋಟದ ಅಫ್ಸಾನಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ. ಮ್ಯಾಟ್ರಿಮೋನಿ ಜಾಹೀರಾತು ಮೂಲಕ ಪದವೀಧರೆ ಅಫ್ಸಾನಾ ಮತ್ತು ಅರ್ಷದ್‌ ಪರಸ್ಪರ ಪರಿಚಿತರಾಗಿದ್ದರು. ದಂಪತಿ ಕಳೆದ ವಾರ ಪುಖ್ರಾಯನ್‌ನಲ್ಲಿರುವ ಅರ್ಷದ್‌ನ ಪೂರ್ವಜರ ಮನೆಗೆ ಭೇಟಿ ನೀಡಿದಾಗ ಅಫ್ಸಾನಾ ಅವರಿಗೆ ಆಘಾತಕಾರಿ ಸತ್ಯ ತಿಳಿಯಿತು. ಅರ್ಷದ್‌ಗೆ ಅದಾಗಲೇ ಮದುವೆಯಾಗಿತ್ತು ಎನ್ನುವುದು ಅಫ್ಸಾನಾ ಅವರಿಗೆ ಆಗಷ್ಟೇ ತಿಳಿದು ಬಂದಿತ್ತು.

ಅರ್ಷದ್‌ ಮತ್ತು ಆತನ ತಾಯಿ ವರದಕ್ಷಿಣೆ ನೀಡುವಂತೆ ಪೀಡಿಸತೊಡಗಿದರು ಎಂದು ಅಫ್ಸಾನಾ ದೂರಿನಲ್ಲಿ ತಿಳಿಸಿದ್ದಾರೆ. ಕೊನೆಗೆ ರೈಲಿನಲ್ಲಿ ಆತ ತ್ರಿವಳಿ ತಲಾಕ್‌ ಕೊಟ್ಟು ನಾಪತ್ತೆಯಾಗಿದ್ದಾನೆ ಎಂದು ಅಫ್ಸಾನಾ ವಿವರಿಸಿದ್ದಾರೆ.

ಅಫ್ಸಾನಾ ಈ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಮನವಿ ಸಲ್ಲಿಸಿ ತನಗೆ ನೆರವಾಗಬೇಕು ಎಂದು ಕೋರಿದ್ದಾರೆ.