Wednesday, 11th December 2024

ಬೆಚ್ಚಿ ಬೀಳಿಸುವ ಕಜ್ಲಿಘರ್ ಕೋಟೆ; 2 ವರ್ಷಗಳ ಅಂತರದಲ್ಲಿ 45ಕ್ಕೂ ಹೆಚ್ಚು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ

ಭೋಪಾಲ್‌: ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಕಳವಳ ಹುಟ್ಟುಹಾಕಿದೆ. ಇತ್ತೀಚೆಗೆ ಮಧ್ಯಪ್ರದೇಶದ ಇಂದೋರ್ ಬಳಿಯ ಜನಪ್ರಿಯ ಪ್ರವಾಸಿ ತಾಣ ಜಾಮ್ ಗೇಟ್‌ (Jam Gate)ನಲ್ಲಿ ನಡೆದ ದರೋಡೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ನಂತರ ಬೆಚ್ಚಿ ಬೀಳಿಸುವ ಮಾಹಿತಿಗಳು ಹೊರ ಬೀಳುತ್ತಿವೆ. ಮಧ್ಯಪ್ರದೇಶದ ಕಜ್ಲಿಘರ್ ಕೋಟೆ (Kajligarh Fort)ಯಲ್ಲಿ ಕೆಲವು ವರ್ಷಗಳ ಹಿಂದೆ ಇದೇ ರೀತಿಯ ಪ್ರಕರಣ ನಡೆದಿರುವುದು ಇದೀಗ ಬಹಿರಂಗಗೊಂಡಿದೆ. ಕೆಲವು ವರ್ಷಗಳ ಹಿಂದೆ ಕಜ್ಲಿಘರ್ ಕೋಟೆಯಲ್ಲಿ 2 ವರ್ಷಗಳ ಅವಧಿಯಲ್ಲಿ 45ಕ್ಕೂ ಹೆಚ್ಚು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು ಎಂದು ಅಂಕಿ-ಅಂಶಗಳು ತಿಳಿಸಿವೆ (Madhya Pradesh Horror).

ಇಂದೋರ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಹಿತಿಕಾ ವಾಸಲ್ ಈ ಬಗ್ಗೆ ಮಾತನಾಡಿ, ʼʼಜಾಮ್ ಗೇಟ್‌ನಲ್ಲಿ ನಡೆದ ಘಟನೆಗೂ ಕಜ್ಲಿಘರ್ ಕೋಟೆಯ ಕೃತ್ಯಗಳಿಗೂ ಸಂಬಂಧವಿಲ್ಲ. ಆದರೂ ಈ ಮಾದರಿಯ ಘಟನೆಗಳು ಕಳವಳ ಉಂಟು ಮಾಡುತ್ತಿವೆʼʼ ಎಂದಿದ್ದಾರೆ. ಕಜ್ಲಿಘರ್ ಕೋಟೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಗಳ ಬಗ್ಗೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿದೆ.

ಕಜ್ಲಿಘರ್ ಕೋಟೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದರೂ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಜಾಮ್ ಗೇಟ್ ಘಟನೆಯಂತೆಯೇ ಕಜ್ಲಿಘರ್ ಪ್ರಕರಣದ ಸಂತ್ರಸ್ತರು ದೂರು ದಾಖಲಿಸಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಜ್ಲಿಘರ್ ಕೋಟೆಯಲ್ಲಿ ಏನಾಗಿತ್ತು?

2015ರಲ್ಲಿ ಕಜ್ಲಿಘರ್ ಕೋಟೆಗೆ ಭೇಟಿ ನೀಡಿದ ಬಿಟೆಕ್ ವಿದ್ಯಾರ್ಥಿಗಳ ಗುಂಪಿನ ಮೇಲೆ ಗ್ಯಾಂಗ್‌ ದಾಳಿ ನಡೆಸಿ ಹಲ್ಲೆ ನಡೆಸಿತ್ತು. ಈ ಬಗ್ಗೆ ಸಿಮ್ರೋಲ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ತನಿಖೆಯ ಹೊರತಾಗಿಯೂ ಆರೋಪಿಗಳು ಕಾನೂನು ಕೈಯಿಂದ ತಪ್ಪಿಸಿಕೊಂಡಿದ್ದರು. ಅದಾಗಿ ಕೆಲವು ದಿನಗಳ ಬಳಿಕ ಕೆಲವು ಯುವಕರು ಅಪಾರ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿರುವುದು ಮತ್ತು ದುಬಾರಿ ಮೊಬೈಲ್ ಫೋನ್‌ಗಳನ್ನು ಹೊಂದಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ, ಅನೇಕ ಅಪರಾಧ ಕೃತ್ಯಗಳು ಬೆಳಕಿಗೆ ಬಂದಿದ್ದವು. ಬಳಿಕ ಪ್ರಮುಖ ಶಂಕಿತರಾದ ಸಂಜಯ್ ಕಟಾರಾ ಮತ್ತು ಕರಣ್ ದಾವರ್ ಸೇರಿದಂತೆ ಗ್ಯಾಂಗ್ ಸದಸ್ಯರನ್ನು ಬಂಧಿಸಲಾಗಿತ್ತು. ಇದರಲ್ಲಿ ಅಪ್ರಾಪ್ತ ವಯಸ್ಕನೂ ಇದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪರಾಧ ಕೃತ್ಯಗಳ ಬಗ್ಗೆ ಬಾಯ್ಬಿಟ್ಟ ಗ್ಯಾಂಗ್‌

ಇದೇ ವೇಳೆ 2 ವರ್ಷಗಳಲ್ಲಿ ಕನಿಷ್ಠ 45 ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ತಮ್ಮ ಗ್ಯಾಂಗ್ ಭಾಗಿಯಾಗಿರುವುದಾಗಿ ಬಂಧಿತರು ಬಾಯ್ಬಿಟ್ಟಿದ್ದರು. ಮಾದಕವಸ್ತು ಸೇವನೆಯ ಚಟ ಹೊಂದಿದ್ದ ಇವರು ಕಜ್ಲಿಘರ್ ಕೋಟೆಗೆ ಬರುವ ಪ್ರವಾಸಿಗರ ಮೇಲೆ ಎರಗಿ ದರೋಡೆ ಮಾಡುತ್ತಿತ್ತು. ಆದರೆ ಪ್ರಕರಣದ ಸಂತ್ರಸ್ತರು ದೂರು ದಾಖಲಿಸಲು ನಿರಾಕರಿಸಿದ್ದರು. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿತ್ತು. ಆದರೆ ಇನ್ನೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.

ಜಾಮ್‌ ಗೇಟ್‌ ಪ್ರಕರಣ

ಜಾಮ್ ಗೇಟ್‌ನಲ್ಲಿ ಸೆಪ್ಟೆಂಬರ್‌ 10ರ ರಾತ್ರಿ ದರೋಡೆ ಮತ್ತು ಸಾಮೂಹಿಕ ಅತ್ಯಾಚಾರ ನಡೆದಿದೆ. ಇಬ್ಬರು ತರಬೇತಿ ನಿರತ ಸೇನಾ ಅಧಿಕಾರಿಗಳು ಮತ್ತು ಅವರ ಸ್ನೇಹಿತೆಯ ಮೇಲೆ ಶಸ್ತ್ರಸಜ್ಜಿತ ದುಷ್ಕರ್ಮಿಗಳ ಗುಂಪು ದಾಳಿ ಮಾಡಿ ಹಲ್ಲೆ ನಡೆಸಿದೆ. ಈ ಪ್ರಕರಣದ ಪ್ರಮುಖ ಶಂಕಿತನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ಸುದ್ದಿಯನ್ನೂ ಓದಿ: Murder Case: ಮೋಸದ ಪ್ರೀತಿಯ ಬಲೆಗೆ ಬಿದ್ದು ಪ್ರಾಣ ಕಳೆದುಕೊಂಡ ಯುವತಿ; ಏನಾಯಿತು ಆಕೆಗೆ?