Thursday, 12th December 2024

Arvind Sawant: ಅವಮಾನಿಸುವ ಉದ್ದೇಶ ಆಗಿರಲಿಲ್ಲ… ಮಹಿಳಾ ಅಭ್ಯರ್ಥಿಯನ್ನು ಆಮದು ಮಾಲು ಎಂದಿದ್ದ ಸಂಸದ ಸಾವಂತ್‌ ಕ್ಷಮೆಯಾಚನೆ

Maharashtra Election

ಮುಂಬೈ: ಶಿವಸೇನೆಯ ಅಭ್ಯರ್ಥಿಯನ್ನು ಆಮದು ಮಾಲು ಎಂದು ಕರೆಯುವ ಮೂಲಕ ವಿವಾದಕ್ಕೀಡಾಗಿದ್ದ ಶಿವಸೇನಾ (Shivasena-UBT) ಸಂಸದ ಅರವಿಂದ್ ಸಾವಂತ್(Arvind Sawant) ಮಹಾರಾಷ್ಟ್ರ ವಿಧಾನಸಭೆ ಚುನಾವಣೆ (Maharashtra Election) ಬೆನ್ನಲ್ಲೇ ನೀಡಿದ್ದ ವಿವಾದಾತ್ಮಕ ಹೇಳಿಕೆಯ ಬಗ್ಗೆ ಶನಿವಾರ ಕ್ಷಮೆ ಯಾಚಿಸಿದ್ದಾರೆ. ನನಗೆ ಯಾರನ್ನೂ ಅವಹೇಳನ ಮಾಡುವ ಉದ್ದೇಶವಿರಲಿಲ್ಲ, ಯಾರನ್ನೂ ಅವಹೇಳನ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.

“ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಅವರಲ್ಲಿ ಕ್ಷಮೆಯಾಚಿಸುತ್ತೇನೆ. ನನ್ನ 55 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಎಂದಿಗೂ ಮಹಿಳೆಯರನ್ನು ಅವಮಾನಿಸಿಲ್ಲ” ಎಂದು ಅವರು ಹೇಳಿದರು.”ರಾಜಕೀಯ ಲಾಭಕ್ಕಾಗಿ ಇದನ್ನು ಮಾಡಲಾಗಿದೆ, ನನಗೆ ಅಂತಹ ಉದ್ದೇಶ ಇರಲಿಲ್ಲ, ನಾನು ಯಾರ ಹೆಸರನ್ನೂ ತೆಗೆದುಕೊಂಡಿಲ್ಲ” ಎಂದು ಹೇಳಿದರು.

ಏನಿದು ವಿವಾದ?

ಶುಕ್ರವಾರ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಾವಂತ್‌, ಶಿವಸೇನೆ ಅಭ್ಯರ್ಥಿ ಶೈನಾ ಎನ್‌ಸಿ ಅವರನ್ನು ಆಮದು ಮಾಡಿದ ಮಾಲು ಎಂದು ಕರೆಯುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದರು. “ಆಮದು ಮಾಡಿದ ಮಾಲ್ ಇಲ್ಲಿ ಕೆಲಸ ಮಾಡುವುದಿಲ್ಲ, ನಮ್ಮ ಬಳಿ ಮೂಲ ಮಾಲ್ ಇದೆ”. ಎಂದು ಅವರು ಹೇಳಿದ್ದರು. ಆ ವೀಡಿಯೊ ಎಲ್ಲಡೆ ವೈರಲ್ ಆಗಿತ್ತು. ಅವರ ಈ ಹೇಳಿಕೆಗೆ ಶೈನಾ ತಕ್ಷಣವೇ ಆಕ್ಷೇಪಣೆ ಎತ್ತಿದರು, ಮಹಿಳೆಯ ಬಗ್ಗೆ ಈ ರೀತಿಯ ಹೇಳಿಕೆಗಳು ಅವಮಾನಕರ ಎಂದು ಹೇಳಿದ್ದರು.

ಸಾವಂತ್ ಹೇಳಿಕೆ ವಿರುದ್ಧ ಶೈನಾ ಎನ್‌ಸಿ ನಾಗ್ಪಾಡಾ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಮುಂಬಾದೇವಿಯಲ್ಲಿರುವ ಪ್ರತಿಯೊಬ್ಬ ಮಹಿಳೆಯನ್ನು ಅವರು ‘ಮಾಲ್’ ಆಗಿ ನೋಡುತ್ತಾರೆಯೇ? ಅವರು ಮಹಿಳೆಯರ ಬಗ್ಗೆ ಯಾವುದೇ ಗೌರವವನ್ನು ತೋರಿಸುವುದಿಲ್ಲ ನಾನು ಕ್ರಮ ಕೈಗೊಂಡರೂ ಅಥವಾ ಕೈಗೊಳ್ಳದೆ ಸುಮ್ಮನಿದ್ದರೂ ಸಾರ್ವಜನಿಕರು ಅವರನ್ನು ನೋಡಿಕೊಳ್ಳುತ್ತಾರೆ ಎಂದು ಶೈನಾ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ : Maharashtra Elections 2024 : ಸ್ವರ ಭಾಸ್ಕರ್‌ ಪತಿ ಫಹಾದ್‌ಗೆ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಟಿಕೆಟ್‌

ಶೈನಾ ಎನ್‌ಸಿ ಬಿಜೆಪಿ ತೊರೆದು ಈ ವಾರದ ಆರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ್ದರು. ನವೆಂಬರ್ 20 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಅವರು ಮುಂಬಾದೇವಿಯಿಂದ ಕಣಕ್ಕಿಳಿದಿದ್ದಾರೆ.