Saturday, 23rd November 2024

Maharashtra Election Result: ಬಿಜೆಪಿಗೆ ಮಹಾರಾಷ್ಟ್ರ ಸಿಎಂ ಹುದ್ದೆ ಬಿಟ್ಟು ಕೊಡುತ್ತಾರಾ ಏಕನಾಥ್ ಶಿಂಧೆ? ಫಡ್ನವೀಸ್ ಹೇಳಿದ್ದೇನು?

Maharashtra Election Result

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಕ್ಷರಶಃ ಬಿಜೆಪಿ ನೇತೃತ್ವದ ಮಹಾಯುತಿ (Mahayuti) ಮೈತ್ರಿಕೂಟದ ಸುನಾಮಿ ಎದ್ದಿದೆ. 288 ಸೀಟುಗಳ ಪೈಕಿ 224 ಸೀಟುಗಳಲ್ಲಿ ಜಯ ದಾಖಲಿಸಿ ಬಹುಮತ ಪಡೆದುಕೊಂಡಿದೆ. ಆ ಮೂಲಕ ಮತ್ತೊಮ್ಮೆ ಸರ್ಕಾರ ರಚಿಸಲು ಮುಂದಾಗಿದೆ. ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವ ಸೇನೆ, ಬಿಜೆಪಿ ಮತ್ತು ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿಯನ್ನು ಮಹಾಯುತಿ ಮೈತ್ರಿಕೂಟ ಎಂದು ಗುರುತಿಸಲಾಗುತ್ತದೆ. ಈ ಪೈಕಿ ಬಿಜೆಪಿ ಬರೋಬ್ಬರಿ 126 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಶಿವ ಸೇನೆ 54 ಮತ್ತು ಎನ್‌ಸಿಪಿ (ಎಪಿ) 40 ಕಡೆಗಳಲ್ಲಿ ಮುಂದೆ ಇದೆ. ಇನ್ನು ವಿಪಕ್ಷಗಳ ಮಹಾ ವಿಕಾಸ್‌ ಅಘಾಡಿ (Maha Vikas Aghadi) ಕೇವಲ 55 ಕಡೆಗಳಲ್ಲಿ ಪ್ರಾಬಲ್ಯ ಸಾಧಿಸಿದೆ (Maharashtra Election Result).

ಇದೀಗ ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಮಹಾಯುತಿ ಸರ್ಕಾರ ರಚನೆಗೆ ಪ್ರಮುಖ ಪಾತ್ರವಹಿಸಿರುವ ಬಿಜೆಪಿ ನಾಯಕ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಶಿವ ಸೇನೆಯ ಏಕನಾಥ್ ಶಿಂಧೆ ಮುಖ್ಯಮಂತ್ರಿ ಪಟ್ಟ ಬಿಟ್ಟು ಕೊಡುತ್ತಾರಾ ಎನ್ನುವ ಕುತೂಹಲ ಮೂಡಿದೆ. ಈ ಬಗ್ಗೆ ಸ್ವತಃ ದೇವೇಂದ್ರ ಫಡ್ನವೀಸ್ ಮಾತನಾಡಿದ್ದಾರೆ. ಅವರೇನು ಹೇಳಿದ್ದಾರೆ? ಇಲ್ಲಿದೆ ವಿವರ.

ದೇವೇಂದ್ರ ಫಡ್ನವೀಸ್ ಹೇಳಿದ್ದೇನು?

ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಂದ್ರ ಫಡ್ನವೀಸ್ ಅವರು ಮೈತ್ರಿಕೂಟದ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ನಂತರ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೇ ತಿಳಿಸಿದ್ದಾರೆ ಎಂದರು. “ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಚುನಾವಣೆಯ ನಂತರ 3 ಪಕ್ಷಗಳ ನಾಯಕರು ಒಟ್ಟಿಗೆ ಕುಳಿತು ಇದನ್ನು ನಿರ್ಧರಿಸುತ್ತಾರೆ ಎಂದು ಮೊದಲ ದಿನದಿಂದಲೇ ತೀರ್ಮಾನಿಸಿದ್ದೇವೆ” ಎಂದು ಅವರು ಸ್ಪಷ್ಪಡಿಸಿದರು. ʼʼಒಮ್ಮತದ ತೀರ್ಮಾನಕ್ಕೆ ಮೈತ್ರಿಕೂಟದ ಎಲ್ಲ ನಾಯಕರು ಬದ್ದರಾಗಿರುತ್ತಾರೆ. ಈ ವಿಚಾರದಲ್ಲಿ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲʼʼ ಎಂದು ಅವರು ತಿಳಿಸಿದರು. ಏಕನಾಥ್‌ ಶಿಂಧೆ ಕೂಡ ಮೈತ್ರಿಕೂಟದ ನಾಯಕರೊಂದಿಗೆ ಚರ್ಚೆ ನಡೆಸಿ ಒಮ್ಮತದಿಂದ ಮುಖ್ಯಮಂತ್ರಿಯನ್ನು ಆರಿಸುವುದಾಗಿ ವಿವರಿಸಿದರು.

ನ. 26ರಂದು ಹೊಸ ಸರ್ಕಾರ ರಚನೆ

ಈ ಬಗ್ಗೆ ಬಿಜೆಪಿ ಪ್ರವೀಣ್‌ ದರೇಕರ್‌ ಮಾತನಾಡಿ, ʼʼಸಹಜವಾಗಿ ಅತೀ ದೊಡ್ಡ ಪಾರ್ಟಿಯಾಗಿ ಹೊರ ಹೊಮ್ಮಿರುವವರಿಗೆ ಮುಖ್ಯಮಂತ್ರಿ ಪಟ್ಟ ಸಿಗಲಿದೆ. ಹಾಗಾದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಆಗಲಿದ್ದಾರೆʼʼ ಎಂದು ತಿಳಿಸಿದರು. ನ. 26ರಂದು ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸಬೇಕಿದ್ದು, ಮೈತ್ರಿಕೂಟ ಶೀಘ್ರದಲ್ಲೇ ಸಭೆ ಸೇರಿ ಮುಖ್ಯಮಂತ್ರಿಯನ್ನು ಆರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಶಿವ ಸೇನೆ ನಾಯಕರೊಬ್ಬರು ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಲು ಸಮ್ಮತಿ ಇದೆ ಎಂದು ಸೂಚಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ದೇವೇಂದ್ರ ಫಡ್ನವೀಸ್ ಅವರಿಗೆ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ. 54 ವರ್ಷದ ದೇವೇಂದ್ರ ಫಡ್ನವೀಸ್ ಅವರು 2014-2019ರ ಅವಧಿಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು.

ಈ ಸುದ್ದಿಯನ್ನೂ ಓದಿ: Maharashtra Election Result: ಮಹಾರಾಷ್ಟ್ರದಲ್ಲಿ ಪ್ರಚಂಡ ಗೆಲುವಿನತ್ತ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ