Saturday, 14th December 2024

ಬಿಜೆಪಿಗೆ ಸೇರ್ಪಡೆಯಾದ ಮಣಿಪುರ ’ಕೈ’ ಮಾಜಿ ಅಧ್ಯಕ್ಷ ಗೋವಿಂದಾಸ್

ನವದೆಹಲಿ: ಮಣಿಪುರ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಉಳಿದಿರುವ ಹೊತ್ತಿನಲ್ಲಿ ಮಣಿಪುರ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಗೋವಿಂದಾಸ್ ಕೊಂತೌಜಮ್ ಭಾನುವಾರ ಭಾರತೀಯ ಜನತಾ ಪಾರ್ಟಿ ಸೇರ್ಪಡೆಗೊಂಡಿದ್ದಾರೆ.

ಮಣಿಪುರ ಮುಖ್ಯಮಂತ್ರಿ ಎನ್.ಬಿರೆನ್ ಸಿಂಗ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಬಿಜೆಪಿ ಹಿರಿಯ ನಾಯಕ ಸಂಬಿತ್ ಪಾತ್ರ ಸಮ್ಮುಖದಲ್ಲಿ ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಬಳಿಕ ದೆಹಲಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಣಿಪುರ ಸಿಎಂ ಎನ್.ಬಿರೆನ್ ಸಿಂಗ್, ಈಶಾನ್ಯ ಭಾರತದ ಏಳಿಗೆಗೆ ಪ್ರಧಾನಿ ಮೋದಿ ಕಾಳಜಿ ವಹಿಸಿದ್ದಾರೆ. ಇತ್ತೀಚೆಗೆ ಕೇಂದ್ರ ಸಂಪುಟಕ್ಕೆ ಐವರು ನಾಯಕರನ್ನು ಸೇರ್ಪಡೆ ಮಾಡಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸಂಪುಟದಲ್ಲಿ ಮಣಿಪುರ ಅಭಿವೃದ್ಧಿ ಯಾಗುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.

ಕಳೆದ ಜುಲೈ 28ರಂದು, 26 ಬುಶ್ನುಪುರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮತ್ತು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಗೋವಿಂದಾಸ್ ಕೊಂತೌಜಮ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ವಿಧಾನಸಭೆಯ ಕಾರ್ಯದರ್ಶಿ ಕಾರ್ಯಾಲಯಕ್ಕೆ ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ.