Friday, 13th December 2024

Marriage In India: ಮುಂದಿನ ಎರಡು ತಿಂಗಳೊಳಗೆ ಭಾರತದಲ್ಲಿ ನಡೆಯಲಿವೆ 48 ಲಕ್ಷ ಮದುವೆಗಳು!

Marriage in India

ದೇಶದಲ್ಲಿ ನವೆಂಬರ್ ಹಾಗೂ ಡಿಸೆಂಬರ್‌ ತಿಂಗಳಿನಲ್ಲಿ ಮದುವೆಗಳು ಹೆಚ್ಚಾಗಿ ನಡೆಯುತ್ತವೆ. ಹಾಗಾಗಿ ಈ ತಿಂಗಳಿನಲ್ಲಿ ಯಾವುದೇ ಬಟ್ಟೆ ಮಳಿಗೆ, ಚಿನ್ನದ ಅಂಗಡಿಗಳಿಗೆ ಹೋದರೆ ಅಲ್ಲಿ ಜನಜಂಗುಳಿಯಿಂದ ತುಂಬಿರುತ್ತದೆ. ಈ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ದೇಶಾದ್ಯಂತ 48 ಲಕ್ಷ ವಿವಾಹಗಳು ನಡೆಯಲಿವೆ ಎಂದು ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಅಂದಾಜಿಸಿದೆ. ಹಾಗಾಗಿ ಈ ಮದುವೆಯ (Marriage in India)ಸೀಸನ್ ಸಮೀಪಿಸುತ್ತಿದ್ದಂತೆ, ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಲಾಭ ಪಡೆದುಕೊಳ್ಳಲು ಸಜ್ಜಾಗುತ್ತಿದ್ದಾರಂತೆ.

ಸಿಎಐಟಿ ಪ್ರಕಾರ, ಈ ಮದುವೆಗಳಿಂದ  ವ್ಯವಹಾರದಲ್ಲಿ 6 ಲಕ್ಷ ಕೋಟಿ ರೂ.ಗಳನ್ನು ಗಳಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ನಿರ್ದಿಷ್ಟವಾಗಿ, ದೆಹಲಿಯಲ್ಲಿಯೇ ಸರಿಸುಮಾರು 4.5 ಲಕ್ಷ ವಿವಾಹಗಳು ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಹಾಗಾಗಿ  ಇದು ಸ್ಥಳೀಯ ಆರ್ಥಿಕತೆಗೆ ಸುಮಾರು 1.5 ಲಕ್ಷ ಕೋಟಿ ರೂ. ಲಾಭ ತಂದುಕೊಡುವ ನಿರೀಕ್ಷೆ ಇದೆ ಎನ್ನಲಾಗಿದೆ. ಈ ವರ್ಷದ ನವೆಂಬರ್ 12ರಂದು ಮದುವೆಯ ಸೀಸನ್ ಶುರುವಾಗಲಿದೆಯಂತೆ. ಹಾಗಾಗಿ ಭಾರತದಾದ್ಯಂತ ಚಿಲ್ಲರೆ ವ್ಯಾಪಾರಿಗಳು ಅತ್ಯಧಿಕ ಮಟ್ಟದ ಆರ್ಥಿಕ ಲಾಭ ಪಡೆಯಲು ತಯಾರಿ ನಡೆಸುತ್ತಿದ್ದಾರೆ.

ಸಿಎಐಟಿಯ ಇತ್ತೀಚಿನ ಅಧ್ಯಯನದಲ್ಲಿ  ಸರಕು ಮತ್ತು ಸೇವೆಗಳನ್ನು ಒಳಗೊಂಡ ಚಿಲ್ಲರೆ ವಲಯವು ಈ ಹಬ್ಬದ ಸಮಯದಲ್ಲಿ ಒಟ್ಟು 5.9 ಲಕ್ಷ ಕೋಟಿ ರೂ.ಗಳ ವಹಿವಾಟು ಸಾಧಿಸುವ ನಿರೀಕ್ಷೆಯಿದೆ ಎಂದು ಎತ್ತಿ ತೋರಿಸಿದೆ. ಈ ಪ್ರವೃತ್ತಿಗೆ ಅನುಗುಣವಾಗಿ, ಸೆಂಕೊ ಗೋಲ್ಡ್‌ನ ಎಂಡಿ ಮತ್ತು ಸಿಇಒ ಸುವಾನ್ಕರ್ ಸೇನ್, ಧಂತೇರಸ್ ಸಮಯದಲ್ಲಿ ಮದುವೆ ಸಂಬಂಧಿತ ಚಿನ್ನದ ಖರೀದಿಯಲ್ಲಿ ಏರಿಕೆಯಾಗಿದೆ ಎಂದು ವರದಿ ಮಾಡಿದ್ದಾರೆ.

ಇದನ್ನೂ ಓದಿ:ಅತಿ ಹೆಚ್ಚು ಚಿನ್ನ ಹೊಂದಿದ ದೇಶಗಳಲ್ಲಿ ಅಮೆರಿಕ ನಂ.1; ಭಾರತಕ್ಕೆ ಎಷ್ಟನೇ ಸ್ಥಾನ?

ನವೆಂಬರ್ 2024 ರಿಂದ ಫೆಬ್ರವರಿ 2025ರವರೆಗೆ ಬಿಡುವಿಲ್ಲದ ಮದುವೆ ಸೀಸನ್‍ಗಾಗಿ ಅನೇಕ ಗ್ರಾಹಕರು ತಯಾರಿ ನಡೆಸುತ್ತಿದ್ದಾರೆ ಎಂಬುದನ್ನು ಅವರು ಗಮನಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಅವರು ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಆಗಸ್ಟ್‌ನಲ್ಲಿ ಸುಂಕ ಕಡಿತವು ಆರಂಭದಲ್ಲಿ ಜನರಲ್ಲಿ ಆಸಕ್ತಿಯನ್ನು ಹುಟ್ಟುಹಾಕಿತು. ಇದರ ಪರಿಣಾಮವಾಗಿ ಅಂಗಡಿಗಳಲ್ಲಿ ಜನಸಂದಣಿ ಹೆಚ್ಚಾಗಿದೆ ಮತ್ತು ಮದುವೆಯ ಋತುವಿನ ಖರೀದಿ ಪ್ರಾರಂಭವಾಗಿದೆ ಎಂದು ಸೇನ್ ತಿಳಿಸಿದ್ದಾರೆ.