Saturday, 14th December 2024

ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್‌ಗೆ ಬೆಂಬಲ: ಮಾಯಾವತಿ

ಲಕ್ನೋ: ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್‌ಗೆ ತಮ್ಮ ಪಕ್ಷದ ಬೆಂಬಲ ನೀಡುತ್ತದೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಘೋಷಿಸಿದ್ದಾರೆ. ಆ.6ರಂದು ಚುನಾವಣೆ ನಡೆಯಲಿದೆ.

ದೇಶದ ಅತ್ಯುನ್ನತ ಹುದ್ದೆ ರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಸರಕಾರ ಹಾಗೂ ಪ್ರತಿಪಕ್ಷಗಳ ನಡುವೆ ಒಮ್ಮತ ಮೂಡದ ಕಾರಣ ಕೊನೆಗೂ ಅದಕ್ಕೆ ಚುನಾವಣೆ ನಡೆದಿದೆ.

ಅದೇ ಪರಿಸ್ಥಿತಿಯಿಂದ ಉಪರಾಷ್ಟ್ರಪತಿ ಹುದ್ದೆಗೆ ಕೂಡ ಆ.6 ರಂದು ಚುನಾವಣೆ ನಡೆಯಲಿದೆ” ಎಂದು ಮಾಯಾವತಿ ಹೇಳಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ಮತ್ತು ತನ್ನದೇ ಆದ ಚಳವಳಿಯ ದೃಷ್ಟಿಯಿಂದ, ಉಪರಾಷ್ಟ್ರ ಪತಿ ಸ್ಥಾನದ ಚುನಾವಣೆಯಲ್ಲಿ ಜಗದೀಪ್ ಧನಕರ್‌ಗೆ ಬೆಂಬಲ ನೀಡಲು ಬಿಎಸ್ಪಿ ನಿರ್ಧರಿಸಿದೆ. ಇದನ್ನು ನಾನು ಔಪಚಾರಿಕವಾಗಿ ಘೋಷಿಸುತ್ತಿದ್ದೇನೆ” ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

2017 ರಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದ ವೆಂಕಯ್ಯ ನಾಯ್ಡು ಅಧಿಕಾರಾವಧಿ ಆ.10 ರಂದು ಕೊನೆಗೊಳ್ಳುತ್ತದೆ.

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ತನ್ನ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಜಗದೀಪ್ ಧನಕರ್ ಘೋಷಿಸಿದರೆ, ವಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವಾ ಕಣದಲ್ಲಿದ್ದಾರೆ.

ಜಗದೀಪ್ ಧನಕರ್ 1989 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು. ಜುಲೈ 2019 ರಲ್ಲಿ ಪಶ್ಚಿಮ ಬಂಗಾಳದ ಗವರ್ನರ್ ಆದ ಬಳಿಕ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರಕಾರದೊಂದಿಗಿನ ಸಂಘರ್ಷಗಳಿಂದ ಸುದ್ದಿ ಮಾಡಿದ್ದಾರೆ.

ಬಿಜು ಜನತಾ ದಳ ಮುಂಬರುವ ಚುನಾವಣೆಯಲ್ಲಿ ಎನ್‌ಡಿಎಯ ಉಪರಾಷ್ಟ್ರಪತಿ ಅಭ್ಯರ್ಥಿ ಜಗದೀಪ್ ಧನಕರ್‌ಗೆ ತನ್ನ ಬೆಂಬಲವನ್ನು ಘೋಷಿಸಿತು. ಮತದಾನದಿಂದ ದೂರವಿರುತ್ತದೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.