Saturday, 14th December 2024

ಮಹಿಳಾ ಪೊಲೀಸ್ ಸಮವಸ್ತ್ರ ಅಳತೆ ತೆಗೆದುಕೊಳ್ಳಲು ಪುರುಷ ಟೈಲರ್‌ !

ಹೈದರಾಬಾದ್: ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಸಮವಸ್ತ್ರಕ್ಕಾಗಿ ಪುರುಷ ಟೈಲರ್‌ಗಳು ಮಹಿಳಾ ಪೊಲೀಸ್ ಸಿಬ್ಬಂದಿಯ ಅಳತೆ ತೆಗೆದು ಕೊಳ್ಳುತ್ತಿರುವ ಚಿತ್ರಗಳು ಮತ್ತು ವಿಡಿಯೊಗಳು ಭಾರೀ ವಿವಾದಕ್ಕೆ ಎಡೆ ಮಾಡಿವೆ.

ಅಳತೆ ತೆಗೆದುಕೊಳ್ಳಲು ಪುರುಷ ಟೈಲರ್‌ಗಳನ್ನು ನಿಯೋಜಿಸಿದ್ದನ್ನು ಗಮನಿಸಿದ ಮಹಿಳಾ ಅಧಿಕಾರಿಗಳು ಇದಕ್ಕೆ ಆಕ್ಷೇಪದ ಜೊತೆ ಆತಂಕ ವ್ಯಕ್ತಪಡಿಸಿ ದರು.

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ, ಪೊಲೀಸ್ ಅಧೀಕ್ಷಕ ವಿಜಯ ರಾವ್ ಅವರು ಮಧ್ಯಪ್ರವೇಶಿಸಿ ಪುರುಷ ಟೈಲರ್‌ ಗಳ ತಂಡವನ್ನು ಬದಲಾಯಿಸಿದರು. ಘಟನೆಯನ್ನು ಬಗೆಹರಿಸಲು ಹೆಚ್ಚುವರಿ ಎಸ್‌ಪಿ ವೆಂಕಟರತ್ನಂ ಅವರನ್ನ ನಿಯೋಜಿಸಲಾಯಿತು.

ಪುರುಷ ಟೈಲರ್ ಅನ್ನು ನಿಯೋಜಿಸಿದ ಹೆಡ್ ಕಾನ್‌ಸ್ಟೆಬಲ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಮಹಿಳಾ ಸಿಬ್ಬಂದಿ ಹಾಗೂ ಅಧಿಕಾರಿಗಳ ಪ್ರೈವೆಸಿ ಸುರಕ್ಷಿತವಾಗಿದೆ ಎಂದು ಭರವಸೆ ನೀಡಿದರು. ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಎಸ್ಪಿ ಹೇಳಿದರು.

ಆಂಧ್ರಪ್ರದೇಶದ ಮಹಿಳಾ ಆಯೋಗದ ಮುಖ್ಯಸ್ಥೆ ವಿ ಪದ್ಮಾ ಅವರು ಕೂಡ ನೆಲ್ಲೂರು ಎಸ್ಪಿ ಜತೆ ಮಾತನಾಡಿ ವಿವರಣೆ ಕೇಳಿದ್ದಾರೆ.